ಚಿತ್ರರಂಗದಲ್ಲಿ 22 ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ, ಕಿರುತೆರೆಯ 65 ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿರುವ ನಟ ರೋಹಿತ್ ನಾಗೇಶ್ ಹಾಗೂ ಸ್ವಾತಿ ನಾಯಕ, ನಾಯಕಿಯಾಗಿ ನಟಿಸಿರೋ ಚಿತ್ರ ವಿಕಾಸ ಪರ್ವ ಸೆ.13 ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ವಿಶೃತ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರಕ್ಕೆ ಅನ್ಬು ಅರಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸಾಮಾಜಿಕ ಕಳಕಳಿಯುಳ್ಳ ಕಥಾಹಂದರ ಈ ಚಿತ್ರದಲ್ಲಿದ್ದು, ಇತ್ತೀಚೆಗೆ ಇಡೀ ಚಿತ್ರತಂಡ ದಾವಣಗೆರೆ, ಹುಬ್ಬಳ್ಳಿ, ಹಾಸನ, ಶಿವಮೊಗ್ಗ ಹಾಗೂ ಮೈಸೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರ ಮುಂದೆ ಹೋಗಿ ಚಿತ್ರದ ಪ್ರಚಾರಕಾರ್ಯ ನಡೆಸಿತು. ಈ ಸಂದರ್ಭದಲ್ಲಿ ವಿಕಾಸಪರ್ವ ಚಿತ್ರವನ್ನು ಏಕೆ ನೋಡಬೇಕು, ಚಿತ್ರದಲ್ಲಿ ನೋಡುಗರಿಗೆ ಇಷ್ಟವಾಗುವಂಥ ಏನೆಲ್ಲ ಅಂಶಗಳಿವೆ ಎಂದು ಹಾಡುಗಳು, ಟ್ರೈಲರ್ ತೋರಿಸಿ ವಿವರಿಸಿದರು. ಚಿತ್ರತಂಡ ಹೋದೆಡೆಯಲ್ಲೆಲ್ಲ ವಿದ್ಯಾರ್ಥಿಗಳು, ಪ್ರೇಕ್ಷಕರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ನಾಗೇಶ್ ವಿಕಾಸಪರ್ವ ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳೂ ಇರೋದ್ರಿಂದ ಇಂಥದ್ದೇ ಜಾನರ್ ಚಿತ್ರ ಎಂದು ಹೇಳಲಾಗಲ್ಲ. ಸಮಾಜದ ಪ್ರತಿಯೊಂದು ಮನೆಯಲ್ಲೂ ಇರಬಹುದಾಂಥ ಗಹನವಾದ ಸಮಸ್ಯೆಯೊಂದನ್ನು ನಮ್ಮ ಚಿತ್ರದಲ್ಲಿ ಹೇಳಿದ್ದೇವೆ. ಅದೇನೆಂದು ನೀವು ಚಿತ್ರಮಂದಿರದಲ್ಲೇ ನೋಡಬೇಕು. ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ನೋಡುಗರ ಮನ ಗೆದ್ದಿದೆ. ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ, ಶನಿವಾರಸಂತೆ ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದೇವೆ ಎಂದು ನಾಗೇಶ್ ಹೇಳಿದರು.
ನಾಯಕಿ ಸ್ವಾತಿ ಮಾತನಾಡಿ ಚಿತ್ರದಲ್ಲಿ ನಾನು ಗೃಹಿಣಿಯ ಪಾತ್ರ ನಿರ್ವಹಿಸಿದ್ದು, ಮಹಿಳೆ ಸಂಸಾರದಲ್ಲಿ ಹೇಗೆಲ್ಲ ಇರಬೇಕು ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ ಎಂದರು. ಕಥೆಗಾರ ಕಮ್ ಕಾರ್ಯಕಾರಿ ನಿರ್ಮಾಪರಾದ ವಿಶೃತ್ ನಾಯಕ್, ನಿರ್ದೇಶಕ ಅನ್ಬು ಅರಸ್ ಕೂಡ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು. ಅಶ್ವಿನ್ ಹಾಸನ್, ಕುರಿರಂಗ, ಬಲ ರಾಜವಾಡಿ, ನಿಶ್ವಿಕಾಗೌಡ ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.
ವಿಕಾಸಪರ್ವ ಚಿತ್ರದಲ್ಲಿ ಎ.ಪಿ.ಓ. ಸಂಗೀತ ನಿರ್ದೇಶನದ ಮೂರು ಹಾಡುಗಳಿದ್ದು, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನವೀನ್ ಸುವರ್ಣ ಕ್ಯಾಮರಾ ವರ್ಕ್ ನಿರ್ವಹಿಸಿದ್ದಾರೆ. ಶ್ರೀನಿವಾಸ ಕಲಾಲ್ ಅವರ ಸಂಕಲನ, ಟೈಗರ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
Be the first to comment