ಮೆಜೆಸ್ಟಿಕ್-2

‘ಮೆಜೆಸ್ಟಿಕ್-2’ ಚಿತ್ರದಲ್ಲಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ

ರಾಮು ಅವರ ನಿರ್ದೇಶನದ ಮೆಜೆಸ್ಟಿಕ್-2 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ದರ್ಶನ್ ಅಭಿನಯಿಸಿದ್ದ ಚಿತ್ರ ಹೇಳಿದ್ದರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೆಲ್ಲಾ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಮೆಜೆಸ್ಟಿಕ್-2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳಲು ಪ್ರಯತ್ನಿಸಿದ್ದಾರೆ.

ಈ ಚಿತ್ರದಿಂದ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಹೊಸ ನಾಯಕನಾಗಿ ಇಂಡಸ್ಟ್ರಿಗೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಹೀರೋ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಈ ಹಾಡಿನಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ನಾಯಕ ಭರತ್ ಕುಮಾರ್ ಹಾಗೂ ನೂರಾರು ಡಾನ್ಸರ್ಸ್ ಅಭಿನಯಿಸಿದ್ದರು. ಕೊರಿಯಾಗ್ರಾಫರ್ ತ್ರಿಭುವನ್ ಮಾಸ್ಟರ್ ಡಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿದ್ದರು.

ಮೆಜೆಸ್ಟಿಕ್-2

ಈ ಸಂದರ್ಭದಲ್ಲಿ ನಟಿ ಮಾಲಾಶ್ರೀ ಮಾತನಾಡುತ್ತ ಇದರಲ್ಲಿ ನನ್ನದು ಒಂದು ಸ್ಪೆಷಲ್ ಎಂಟ್ರಿ. ನಿರ್ದೇಶಕ ರಾಮು ಅವರು ನಮ್ಮ ರಾಮು ಫಿಲಂಸ್ ಬ್ಯಾನರಿನಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ಕಂಡರೆ ತುಂಬಾ ಅಭಿಮಾನ. ಅವರು ಬಂದು ಮೇಡಂ‌ ನನ್ನ‌ ಮೊದಲ ಸಿನಿಮಾಗೆ ನಿಮ್ಮ ಆಶೀರ್ವಾದ ಬೇಕು. ನೀವು ಬಂದು ಒಂದ್ ಸ್ಟೆಪ್ ಹಾಕಬೇಕು ಎಂದು ಕೇಳಿಕೊಂಡರು. ನಾನು ಸ್ಟೆಪ್ ಹಾಕಿ ತುಂಬಾ ವರ್ಷವಾಯ್ತು. ಎಲ್ಲಾ ಮರೆತುಹೋಗಿದೆ ಎಂದೆ. ಆಗ ತ್ರಿಭುವನ್ ಮಾಸ್ಟರ್ ಬಂದು ಮೇಡಂ ನೀವು ಟ್ರೈ ಮಾಡಿ ನಾನಿದ್ದೇನೆ ಅಂದರು. ಇದು ಮಾರಮ್ಮ ದೇವಿ ಸಾಂಗ್. ನನ್ನ ಸ್ಟೆಪ್ಸ್ ನೋಡಿ ನನಗೇ ಖುಷಿಯಾಯ್ತು. ಇದು ನಾನೇನಾ ಅನಿಸ್ತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು. ಐ ಯಾಮ್ ರಿಯಲಿ ಎಂಜಾಯ್ಡ್ ಎಂದು ಖುಷಿಯಿಂದ ಹೇಳಿದರು.

ಚಿತ್ರದ ನಿರ್ಮಾಪಕ ಹೆಚ್.ಆನಂದಪ್ಪ ಅವರು ಮಾತನಾಡಿ ಈಗಾಗಲೇ ಚಿತ್ರದ ಶೇ.80ರಷ್ಡು ಚಿತ್ರೀಕರಣ ಮುಕ್ತಾಯಗೊಂಡಿದೆ. ಇಂದು ನಾಯಕ ಹಾಗೂ ಮಾಲಾಶ್ರೀ ಮೇಡಂ ಅಭಿನಯದ ಹಾಡಿನ ಶೂಟಿಂಗ್ ನಡೆಯುತ್ತಿದೆ. ಆಂಥ ಮಹಾನ್ ನಟಿ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯ. ಬರುವ ದೀಪಾವಳಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಮೆಜೆಸ್ಟಿಕ್-2

ನಿರ್ದೇಶಕ ರಾಮು ಮಾತನಾಡುತ್ತ ಈ ಹಾಡನ್ನು ಮೂರು ದಿನಗಳ ಕಾಲ ಶೂಟ್ ಮಾಡುತ್ತೇನೆ. ಇದಾದ ನಂತರ ಒಂದು ಡ್ಯುಯೆಟ್ ಸಾಂಗ್ ಹಾಗೂ ಆಕ್ಷನ್ ಸೀಕ್ವೇನ್ಸ್ ಮಾಡಬೇಕಿದೆ. ಶೂಟಿಂಗ್ ಜೊತೆ ಜೊತೆಗೇ ಎಡಿಟಿಂಗ್ ಕೂಡ ನಡೆಯುತ್ತಿದೆ. ಚಿತ್ರ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿ ಬಂದಿದೆ ಎಂದರು.

ನಾಯಕ ಭರತ್ ಮಾತನಾಡಿ ನನ್ನ ಮೊದಲ ಚಿತ್ರದಲ್ಲೇ ಲೆಜೆಂಡರಿ ಆಕ್ಟರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಡಂ ಅವರನ್ನು ನೋಡಿ ತುಂಬಾ ಕಲಿತೆ. ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನ ಮೆಜೆಸ್ಟಿಕ್ ಹೇಗಿರುತ್ತೆ ಅಂತ ಚಿತ್ರದಲ್ಲಿ ನೋಡಬಹುದು. ಈ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆ ಎಂದು ಹೇಳಿದರು. ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು.

ಕೊರಿಯೋ ಗ್ರಾಫರ್ ತ್ರಿಭುವನ್ ಮಾತನಾಡಿ ಈಗಾಗಲೇ ಈ ಚಿತ್ರದಲ್ಲಿ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೇನೆ. ಈಗಾಗಲೇ ಒಂದು ಹಾಡನ್ನು ಶೂಟ್ ಮಾಡಿದ್ದೇವೆ. ಮಾಲಾಶ್ರೀ ಅವರ ಜೊತೆ ತುಂಬಾ ಹಾಡುಗಳನ್ನು ಮಾಡಿದ್ದೇನೆ. ಈಗ ಮತ್ತೆ ಕೆಲಸ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದು ಹೇಳಿದರು.

ಚಿತ್ರದಲ್ಲಿ ನಾಯಕ ಭರತ್, ದರ್ಶನ್ ಫ್ಯಾನ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ.

ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ “ಮೆಜೆಸ್ಟಿಕ್ 2” ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!