ಇಂದು ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗಳ ಓಟದ ನಡುವೆ ಚಂದನವನದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿವೆ.
‘ಪೌಡರ್’:
ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಹಾಸ್ಯಪ್ರಧಾನ ಚಿತ್ರವಾಗಿದೆ. ‘ಗುಲ್ಟು’ ಸಿನಿಮಾ ನಿರ್ದೇಶಿಸಿದ್ದ ಜನಾರ್ದನ್ ಚಿಕ್ಕಣ್ಣ ಮೊದಲ ಬಾರಿಗೆ ಹಾಸ್ಯಪ್ರಧಾನ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಮೂಲಕಥೆ ಮುಂಬೈನ ದೀಪಕ್ ವೆಂಕಟೇಶನ್ ಅವರದ್ದು. ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ದಿಢೀರನೆ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಚಿತ್ರದ ಕಥಾಹಂದರ. ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆ.ಆರ್.ಜಿ. ಸ್ಟೂಡಿಯೊಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಇದು ಬರೀ ಡ್ರಗ್ಸ್ ಅಥವಾ ಡ್ರಗ್ಸ್ ಕುರಿತು ಸಂದೇಶ ಚಿತ್ರ ಸಾರುವ ಚಿತ್ರ ಎಂದಲ್ಲ. ಇಲ್ಲೊಂದು ಡ್ರಗ್ಸ್ ಪ್ಯಾಕ್ ಮಿಸ್ ಆಗಿರುತ್ತದೆ. ಅದನ್ನು ಮಾರುವಾಗ ಏನೆಲ್ಲಾ ಆಗುತ್ತದೆ ಎನ್ನುವ ತಮಾಷೆಯ ಚಿತ್ರ. ಇಲ್ಲಿ ಯಾವುದೇ ಲಾಜಿಕ್ ಇಲ್ಲ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ’ ಎಂದಿದ್ದಾರೆ ನಿರ್ಮಾಪಕ ಕಾರ್ತಿಕ್ ಗೌಡ.
‘ತಾಜ್’:
ನೈಜ ಘಟನೆ ಆಧಾರಿತ ಸಿನಿಮಾ ‘ತಾಜ್’. ಬಿ. ರಾಜರತ್ನ ಅವರ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ ಚಿತ್ರಕ್ಕಿದೆ. ಶ್ರೀ ಪಾವನಿ ಲಕ್ಷ್ಮೀ ಕಂಬೈನ್ಸ್ ಬ್ಯಾನರ್ ನ ಷಣ್ಮುಖ್, ಶ್ರೀಮತಿ ಲಕ್ಷ್ಮಿ ಷಣ್ಮುಖ ಹಾಗೂ ಯರಂಗಳ್ಳಿ ಮರಿಯಮ್ಮ ಅವರ ನಿರ್ಮಾಣ ಚಿತ್ರಕ್ಕಿದೆ.
ಇದು ಎರಡು ಧರ್ಮಗಳ ಯುವಕ, ಯುವತಿ ನಡೆಯುವ ಪ್ರೇಮ ಕಥೆ. ಷಣ್ಮಖ ಜೈ, ಅಪ್ಸರಾ, ಪದ್ಮಾ ವಸಂತಿ, ಶೋಭರಾಜ್, ಪಟ್ರೆ ನಾಗರಾಜ್, ಬಲರಾಜ್ ವಾಡಿ, ವರ್ಧನ್, ಕಡ್ಡಿ ವಿಶ್ವ, ಕಾಮಿಡಿ ಸೂರಜ್, ಶಿವಣ್ಣ, ಕಾಶೀನಾಥ್, ಮೈಸೂರ್ ಜಗದೀಶ್ ತಾರಾಬಳಗದಲ್ಲಿದ್ದಾರೆ.
ಚಂದ್ರು ಬಂಡೆ ಅವರ ಸಾಹಸ, ಜೆಸ್ಸಿಗಿಫ್ಟ್ ಅವರ ಹಾಡುಗಳು, ಜೈ ಆರ್ಯ ಅವರ ನೃತ್ಯ, ಹಿತನ್ ಹಾಸನ್ ಅವರ ಹಿನ್ನಲೆ ಸಂಗೀತ, ದೀಪಕ್ ಕುಮಾರ್ ಜೆ. ಕೆ ಅವರ ಕ್ಯಾಮರಾ ಕೈ ಚಳಕ, ಶ್ರೀ ಜವಳಿ ಅವರ ಸಂಕಲನ ಚಿತ್ರಕ್ಕಿದೆ.
‘ಸಿ’:
ಇದು ಬಹುತೇಕ ಹೊಸಬರಿಂದ ಕೂಡಿರುವ ಸಿನಿಮಾ. ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಎಜಿಎಸ್ ಪ್ರೊಡಕ್ಷನ್ ಬಂಡವಾಳ ಹೂಡಿದೆ.
ಕಣ್ಣು ಕಾಣದ ಮಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಒದ್ದಾಡುವ ತಂದೆಯ ಪಾತ್ರದಲ್ಲಿ ಕಿರಣ್ ನಟಿಸಿದ್ದಾರೆ. ಮಗಳ ಶಸ್ತ್ರಚಿಕಿತ್ಸೆಗಾಗಿ ಏನು ಬೇಕಾದರೂ ಮಾಡಲು ಹಠಕ್ಕೆ ಬೀಳುವ ಅಪ್ಪ ಹೇಗೆ ಮೆಡಿಕಲ್ ಮಾಫಿಯಾದ ಬುಡ ಅಲುಗಾಡಿಸುವುದು ಸಿನಿಮಾದ ಕಥೆ. ಸಿನಿಮಾ ಸಸ್ಪೆನ್ಸ್ ಕಂ ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿದೆ.
ಈ ಸಿನಿಮಾಗಳ ಜೊತೆಗೆ ‘ದಿ ಜರ್ನಲಿಸ್ಟ್’ ಸಿನಿಮಾ ಬಿಡುಗಡೆಯಾಗಿದೆ.
Post Views:
83
Be the first to comment