ಕರ್ನಾಟಕ ಮೂಲದ ನಟಿ ಸನಮ್ ಶೆಟ್ಟಿ, ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳಗಳು ನಡೆಯುತ್ತಿವೆ ಎಂಬ ಜಸ್ಟಿಸ್ ಹೇಮಾ ಸಮಿತಿ ವರದಿ ಬೆನ್ನಲ್ಲೇ ತಮಿಳು ಸಿನಿಮಾರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಬಾಂಬ್ ಸಿಡಿಸಿದ್ದಾರೆ.
2012ರಲ್ಲಿಯೇ ತಮಿಳಿನ ಅಂಬುಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸನಮ್ ಶೆಟ್ಟಿ, ತಮಿಳು ಇಂಡಸ್ಟ್ರಿಯಲ್ಲಿ ಯಾರಾದ್ರೂ ಹಾಸಿಗೆ ಹಂಚಿಕೊಳ್ಳಲು ಕರೆದರೆ ಹೋಗಲೇಬೇಕೆ ಹೊರತು, ಇಲ್ಲ ಎನ್ನಲು ಅವಕಾಶವೇ ಇಲ್ಲ ಎನ್ನುವ ಮೂಲಕ ತಮಿಳು ಚಿತ್ರದ್ಯೋಮದ ಕಾಸ್ಟಿಂಗ್ ಕೌಚ್ ಕರಾಳತೆಯ ಬಗ್ಗೆ ಮಾತನಾಡಿದ್ದಾರೆ.
“ಜಸ್ಟಿಸ್ ಹೇಮಾ ಸಮಿತಿಯ ವರದಿಯ ವಿವರ ನನಗೆ ತಿಳಿದಿಲ್ಲ. ಆದರೆ ಈ ಕ್ರಮ ಚೆನ್ನಾಗಿದೆ. ಇಂತಹ ವರದಿಯನ್ನು ತಂದ ಜಸ್ಟಿಸ್ ಹೇಮಾ ಸಮಿತಿ ಮತ್ತು ಕೇರಳ ಸರ್ಕಾರಕ್ಕೆ ಧನ್ಯವಾದಗಳು. ತಮಿಳು ಚಿತ್ರರಂಗದಲ್ಲಿಯೂ ಇದೇ ರೀತಿಯ ಘಟನೆಗಳು ನಡೆಯುತ್ತವೆ. ಇದು ನನ್ನ ಸ್ವಂತ ಅನುಭವದಿಂದ ನಾನು ಹೇಳುತ್ತಿದ್ದೇನೆ”ಎಂದಿದ್ದಾರೆ ಸನಮ್.
“ಚಿತ್ರೋದ್ಯಮದಲ್ಲಿ ಎಲ್ಲರೂ ಕೆಟ್ಟವರಲ್ಲ. ಕಾಸ್ಟಿಂಗ್ ಕೌಚ್‌ಗೆ ಮಹಿಳೆಯರಷ್ಟೇ ಅಲ್ಲ ಪುರುಷರೂ ಬಲಿಯಾಗುತ್ತಿದ್ದಾರೆ. ನನ್ನಲ್ಲಿ ಪ್ರತಿಭೆ ಇದ್ದರೆ ಅವಕಾಶಗಳು ಬರುತ್ತವೆ ಎಂಬ ನಂಬಿಕೆ ನನಗಿದೆ. ಅಡ್ಜೆಸ್ಟ್ಮೆಂಟ್ ಮಾತ್ರ ಅವಕಾಶವನ್ನು ಪಡೆಯುವ ಏಕೈಕ ಮಾರ್ಗ ಎಂಬ ಕ್ರೂರ ಸನ್ನಿವೇಶದ ವಿರುದ್ಧ ನಾನು ಧ್ವನಿ ಎತ್ತುತ್ತಿದ್ದೇನೆ. ನಿಮ್ಮನ್ನು ನೀವು ನಂಬಿದರೆ, ಅಡ್ಜೆಸ್ಟ್ಮೆಂಟ್ ಇಲ್ಲದೆ ನಿಮಗೆ ಕೆಲಸ ಸಿಗುತ್ತದೆ. ಈ ವಿಚಾರದಲ್ಲಿ ನಾನೂ ಸೇರಿ, ಈ ಕರಾಳತೆಯನ್ನು ಅನುಭವಿಸಿದವರು ಮುಂದೆ ಬಂದು ಅಂಥವರನ್ನು ಬಯಲಿಗೆಳೆಯಬೇಕು. ಚಿತ್ರೋದ್ಯಮದಲ್ಲಿ ಮಹಿಳೆಯರಲ್ಲಿ ಒಗ್ಗಟ್ಟಿನ ಕೊರತೆ ಇಲ್ಲ ಎಂಬುದನ್ನು ತೋರಿಸಬೇಕು. ಈ ಹೋರಾಟಕ್ಕೆ ಪುರುಷರು ಬರಲಿ ಎಂದು ನಾವು ಕಾಯಬೇಕಾಗಿಲ್ಲ” ಎಂದಿದ್ದಾರೆ ಸನಮ್ ಶೆಟ್ಟಿ.
ಸನಮ್ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ, ಪರಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ತೆರೆಗೆ ಬಂದ ಅಥರ್ವ ಚಿತ್ರದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ್ದರು.
Be the first to comment