ಕಳೆದ ಹಲವು ವರ್ಷಗಳಿಂದಲೂ ಜೀ ಕನ್ನಡ ವಾಹಿನಿ ಸದಾ ತನ್ನ ಕಾರ್ಯಕ್ರಮ ಕಟ್ಟಿಕೊಡುವಲ್ಲಿ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ವೀಕ್ಷಕರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದೆ. ಜೋಡಿ ಹಕ್ಕಿ, ಸುಬ್ಬಲಕ್ಷ್ಮಿಸಂಸಾರ, ಕಮಲಿ, ಯಾರೆ ನೀ ಮೋಹಿನಿ, ವಿಷ್ಣು ದಶಾವತಾರ, ಮಹಾದೇವಿ, ನಾಗಿಣಿ, ಪಾರು, ಬ್ರಹ್ಮಗಂಟು ಮೊದಲಾದ ಧಾರಾವಾಹಿಗಳು ಹೊಸ ಇತಿಹಾಸ ಬರೆದಿವೆ. ವಾರಾಂತ್ಯ ಧಾರಾವಾಹಿ ಉಘೇ ಉಘೇ ಮಾದೇಶ್ವರ, ಅಲ್ಲದೆ ಸರಿಗಮಪ, ಡ್ರಾಮಾದಂಥ ರಿಯಾಲಿಟಿ ಷೊಗಳು ಕನ್ನಡಿಗರ ಮನೆಮಾತಾಗಿವೆ.
ಇದೀಗ ಜೀ ಕನ್ನಡ ವಾಹಿನಿಯಲ್ಲಿ ಆತ್ಮಬಂಧನ ಎಂಬ ಮತ್ತೊಂದು ಹಾರರ್ ಧಾರಾವಾಹಿ ಮೂಡಿಬರಲಿದೆ. ಜನನ ಮತ್ತು ಮರಣದ ಸಾಕ್ಷಿ ಆತ್ಮ. ಮರಣಾ ನಂತರವೂ ಆತ್ಮ ತನ್ನ ಪ್ರೀತಿ ಮತ್ತು ದ್ವೇಷವನ್ನು ಬಿಡುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಈ ಎಳೆಯನ್ನು ಇಟ್ಟುಕೊಂಡು ತಾಯಿ ಮತ್ತು ಪುಟ್ಟ ಮಗನ ನಡುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ಆತ್ಮಬಂಧನ ಧಾರಾವಾಹಿಯನ್ನು ನಿರೂಪಿಸಲಾಗುತ್ತಿದೆ. ದುರಂತದಲ್ಲಿ ಮರಣವನ್ನಪ್ಪುವ ಮಗನ ಆತ್ಮ ತನ್ನ ಅಮ್ಮನ ಪ್ರೀತಿಗಾಗಿ ಹಂಬಲಿಸಿ ಬರುವ ಮತ್ತು ಆ ಪ್ರೀತಿಗೆ ಅಡ್ಡ ಬರುವವರನ್ನು ಶಿಕ್ಷಿಸುವ ಕಥಾಹಂದರ ಇದರಲ್ಲಿದೆ.
ಈ ಹಿನ್ನೆಲೆಯಲ್ಲಿ ಕೌಟುಂಬಿಕ ಪ್ರೀತಿ-ದ್ವೇಷಗಳು ಹಾಗೂ ಪತಿ-ಪತ್ನಿಯರ ಸಂಬಂಧದ ನಡುವೆ ಏಳುವ ಬಿರುಗಾಳಿ ಹೊಸ ಬಗೆಯಲ್ಲಿ ನಿರೂಪಿತವಾಗಿದೆ. ಈ ಧಾರಾವಾಹಿಯನ್ನು ನಿರ್ದೇಶಕ ಜಿ.ಕೆ. ಸತೀಶ್ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ. ದ್ವಿಜ ಕ್ರಿಯೇಷನ್ಸ್ ಅಡಿಯಲ್ಲಿ ಮಹೇಶ್ ಗೌಡ, ಡಾ| ಸುಮಾ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಇದರ ಕಥಾವಿಸ್ತರಣೆ, ಚಿತ್ರಕತೆಯನ್ನು ಎಸ್. ಸೆಲ್ವಂ ಮತ್ತು ಗಿರೀಶ್ ತಂಡ ನಿರ್ವಹಿಸಿದೆ. ರತ್ನಗಿರಿ ಅವರ ಸಂಭಾಷಣೆ, ವಿನಯ್ ಅವರ ಸಂಗೀತ, ಹರ್ಷಪ್ರಿಯ ಅವರ ಶೀರ್ಷಿಕೆ ಸಾಹಿತ್ಯ ಇದಕ್ಕಿದೆ.
ಎದೆಯಲ್ಲಿ ಕಂಪನ ಹುಟ್ಟಿಸುವ ಗ್ರಾಫಿಕ್ಸ್ ಪ್ರತಿ ಸಂಚಿಕೆಯಲ್ಲೂ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಆತ್ಮಬಂಧನ ವೀಕ್ಷಕರಿಗೆ ಮನರಂಜನೆಯ ಹೊಸ ಬಾಗಿಲು ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಜೀ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು. ಎಲ್ಲ ವಯೋಮಾನದವರನ್ನೂ ಗಮನದಲ್ಲಿರಿಸಿಕೊಂಡು ಕುಟುಂಬ ಸಮೇತ ನೋಡುವಂತೆ ಈ ಹಾರರ್ ಧಾರಾವಾಹಿ ರೂಪಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ಜಿ.ಕೆ. ಸತೀಶ್ ಕೃಷ್ಣನ್. ತಾರಾಗಣದಲ್ಲಿ ರಜನಿ, ಪ್ರಶಾಂತ್, ಬಾಲನಟ ಆಲಾಪ್, ಶಿವಾನಿ, ಲಕ್ಷ್ಮೀಗೌಡ, ರಾಮಮೂರ್ತಿ, ರಾಜೇಶ್, ನೇತ್ರಾ ಸಿಂಧ್ಯಾ, ಸುನೇತ್ರ ಪಂಡಿತ್ ಮುಂತಾದವರಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 17 ರಿಂದ ಸೋಮ-ಶುಕ್ರವಾರ ರಾತ್ರಿ 10:30ಕ್ಕೆ ಆತ್ಮಬಂಧನ ಪ್ರಸಾರವಾಗಲಿದೆ.
Pingback: Tow Truck Dover