ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾದ ನಿರ್ದೇಶಕ!

ಒಟಿಟಿಗಳ ಧೋರಣೆಯಿಂದ ಬೇಸತ್ತು  ಪ್ರತಿಭಾವಂತ ನಿರ್ದೇಶಕ ಪೃಥ್ವಿ ಕೊಣನೂರು ತಮ್ಮ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಆಗಸ್ಟ್ 15 ರಂದು ಯೂಟ್ಯೂಬ್​ನಲ್ಲಿ ಪ್ರಶಸ್ತಿ ವಿಜೇತ ಸಿನಿಮಾಗಳಾದ ‘ರೈಲ್ವೆ ಚಿಲ್ಡ್ರನ್’, ‘ಪಿಂಕಿ ಎಲ್ಲಿ’, ‘ಹದಿನೇಳೆಂಟು’  ಸಿನಿಮಾಗಳು ಬಿಡುಗಡೆ ಆಗಲಿವೆ.

ಪೃಥ್ವಿ ತಮ್ಮ ಕೊಣನೂರು ಪ್ರೊಡಕ್ಷನ್ಸ್​ @konanur2279 ಯೂಟ್ಯೂಬ್ ಚಾನೆಲ್​ನಲ್ಲಿ  ಸಿನಿಮಾಗಳನ್ನು ಅಪ್​ಲೋಡ್ ಮಾಡಲಿದ್ದಾರೆ. ಸಿನಿಮಾಗಳನ್ನು ಅಲ್ಲಿ ಉಚಿತವಾಗಿ ನೋಡಬಹುದಾಗಿದೆ. ಸಿನಿಮಾದ ಜೊತೆಗೆ   ಕ್ಯುಆರ್ ಕೋಡ್ ನ್ನು ಸಹ ನೀಡಲಿದ್ದು,  ನೋಡಿದವರಿಗೆ ಸಿನಿಮಾ ಇಷ್ಟವಾದರೆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬಹುದಾಗಿದೆ.

”ಕನ್ನಡ ಸಿನಿಮಾಗಳ ಬಗ್ಗೆ ಒಟಿಟಿಗಳ ಧೋರಣೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ಸಿನಿಮಾಗಳನ್ನು ನೋಡದೆಯೇ ಸಿನಿಮಾಗಳನ್ನು  ಅವರ ವೇದಿಕೆಯಲ್ಲಿ ಪ್ರದರ್ಶಿಸಲು ನಿರಾಕರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ,  ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದ ಸಿನಿಮಾವನ್ನೂ  ಒಟಿಟಿಗಳು ಕನಿಷ್ಠ ನೋಡಲು ನಿರಾಕರಿಸುತ್ತಿವೆ. ಕನ್ನಡಿಗರಿಗೆ ಅಭಿರುಚಿ ಇಲ್ಲ ಎಂಬುದು ಅವರ ಭಾವನೆಯಾ? ಅಥವಾ ಗಂಭೀರ ವಿಷಯವನ್ನು ಕನ್ನಡಿಗರು ಹ್ಯಾಂಡಲ್ ಮಾಡುವ ಶಕ್ತಿ ಇಲ್ಲ ಎಂಬುದು ಅವರ ಚಿಂತನೆಯಾ? ಅರ್ಥವಾಗುತ್ತಿಲ್ಲ” ಎಂದಿದ್ದಾರೆ ಪೃಥ್ವಿ.

”ಒಟಿಟಿಗಳ  ಧೋರಣೆಯಿಂದ ಕಳೆದ 2-3 ವರ್ಷಗಳಲ್ಲಿ ಹಲವು ಒಳ್ಳೆಯ ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ತಲುಪಿಲ್ಲ. ಟಿವಿ ಚಾನೆಲ್​ಗಳ ಧೋರಣೆಯೂ ಹೀಗೆಯೇ ಆಗಿದೆ.  ಟಿವಿ ಚಾನೆಲ್​,ನಮ್ಮ ಪ್ರೇಕ್ಷಕರು, ಗ್ರಾಮೀಣ ಭಾಗವದರು, ಅನಕ್ಷರಸ್ಥರು ಮತ್ತು ವಯಸ್ಸಾದವರು. ಅಂಥಹವರು ನೋಡುವ ಸಿನಿಮಾಗಳನ್ನು ಮಾತ್ರವೇ ಖರೀದಿ ಮಾಡುತ್ತೇವೆ ಎನ್ನುತ್ತಾರೆ. ಗ್ರಾಮೀಣ ಭಾಗದವರು ಗಂಭೀರ ಪ್ರೇಕ್ಷಕರಲ್ಲ, ಅನಕ್ಷರಸ್ಥರು ಮಾತ್ರ ಟಿವಿ ನೋಡುತ್ತಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!