ಟಾಲಿವುಡ್ ನಟ ನಾಗ ಚೈತನ್ಯ ಆಗಸ್ಟ್ 8ರಂದು ನಟಿ ಶೋಭಿತಾ ಧೂಳಿಪಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೋಭಿತಾ ಅವರ ಸಹೋದರಿ ಸಮಂತಾ ಧೂಳಿಪಾಲ ನಿಶ್ಚಿತಾರ್ಥದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಶುಭ ಹಾರೈಸಿದ್ದಾರೆ.
ಹೈದರಾಬಾದ್‌ನಲ್ಲಿರುವ ನಾಗಾರ್ಜುನ ಅವರ ನಿವಾಸದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಕುಟುಂಬದ ಆಪ್ತರು, ಸ್ನೇಹಿತರು ಈ ಸಮಾರಂಭದಲ್ಲಿ ಹಾಜರಿದ್ದರು.
2022ರ ಮೇಯಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಶೋಭಿತಾ ಧೂಳಿಪಾಲ ತಮ್ಮ ʻಮೇಜರ್ʼ ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಆ ಸಮಯದಲ್ಲಿ ಅವರು ಜನ್ಮದಿನ ಆಚರಿಸಿಕೊಂಡಿದ್ದರು. ನಾಗ ಚೈತನ್ಯ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಇಬ್ಬರೂ ಸ್ನೇಹಿತರಾದರು. ಎರಡು ವರ್ಷಗಳ ಕಾಲ ಒಟ್ಟಿಗೆ ಸಮಯ ಕಳೆದಿದ್ದರು. ಇದೀಗ ಉಂಗುರ ಬದಲಾಯಿಸುವ ಮೂಲಕ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ನಾಗ ಚೈತನ್ಯ 2017ರಲ್ಲಿ ಬಹುಭಾಷಾ ನಟಿ, ಸೂಪರ್ ಸ್ಟಾರ್ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರೂ ಬಳಿಕ ಭಿನ್ನಾಭಿಪ್ರಾಯ ತಲೆದೋರಿದ ಹಿನ್ನಲೆಯಲ್ಲಿ 2021ರಲ್ಲಿ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು.
2022ರಲ್ಲಿ ನಾಗ ಚೈತನ್ಯ ʼಲಾಲ್ ಸಿಂಗ್ ಛಡ್ಡಾʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರೂ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಕಳೆದ ವರ್ಷ ತಮಿಳು ಮತ್ತು ತೆಲುಗಿನಲ್ಲಿ ತೆರೆಕಂಡ ʼಕಸ್ಟಡಿʼ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಸದ್ಯ ʼಥಂಡೆಲ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಶೋಭಿತಾ 2016ರಲ್ಲಿ ಬಿಡುಗಡೆಯಾದ ʼರಾಮನ್ ರಾಘವ್ 2.0ʼ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ತೆಲುಗು, ತಮಿಳು, ಮಲಯಾಳಂನಲ್ಲಿಯೂ ಅಭಿನಯಿಸಿರುವ ಅವರು ʼಮಂಕಿ ಮ್ಯಾನ್ʼ ಎನ್ನುವ ಇಂಗ್ಲಿಷ್ ಚಿತ್ರ ಮತ್ತು ಹಿಂದಿಯ ʼಸಿತಾರಾʼ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Be the first to comment