ಬೆಳ್ಳಿಪರದೆಗೆ ಕನಸಿನ ಮೂಟೆ ಹೊತ್ಕೊಂಡು ಗಾಂಧಿನಗರಕ್ಕೆ ಬರೋರಿಗೆ ಸ್ಯಾಂಡಲ್ವುಡ್ ನ ‘ಒಳಸತ್ಯ’ ಗೊತ್ತಿರಬೇಕು ಅಂತಾರೆ ನಟ ಪ್ರಸಾದ್ ವಸಿಷ್ಠ!
ಕಿರುತೆರೆಯಲ್ಲಿ ಪುಟ್ಟಗೌರಿಮದುವೆ, ಗೃಹಲಕ್ಷ್ಮೀ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ತುಮಕೂರಿನ ಪ್ರಸಾದ್ ವಸಿಷ್ಠ, ಈಗ ಸ್ಯಾಂಡಲ್ ವುಡ್ ಮೆಟ್ಟಿಲು ಹತ್ತಿದ್ದಾರೆ. ‘ಕಬಂಧ’ ಸಿನಿಮಾ ಮೂಲಕ ಒಂದು ಹೊಸ ಪ್ರಯೋಗಶೀಲತೆಯ ರುಚಿ ಹಿಡಿಸೋ ಉತ್ಸಾಹದಲ್ಲೇ ಪ್ರಸಾದ್ ಪ್ರಚಾರಕಾರ್ಯಗಳಲ್ಲಿ ತೊಡಗಿಸಿಕೊಳ್ತಿದಾರೆ. ಈ ಸಿನಿಮಾದಲ್ಲಿ ನಿರ್ಮಾಣದ ಜೊತೆಗೆ ನಟನೆ ಕೂಡ ಮಾಡಿದ್ದಾರೆ.
ಚಿತ್ರದಲ್ಲಿ ಕಿಶೋರ್, ಅವಿನಾಶ್ ಹಾಗೂ ಯೋಗರಾಜ್ ಭಟ್ ರಂತಹ ದಿಗ್ಗಜರ ಜೊತೆ ಕೆಲಸ ಮಾಡಿದ್ದೇ ಒಂದು ರೋಚಕ ಅನುಭವ ಎನ್ನುವ ಪ್ರಸಾದ್ ಅದೃಷ್ಟಕ್ಕಿಂತ ಪರಿಶ್ರಮದಲ್ಲೇ ನಂಬಿಕೆ ಇಟ್ಟಿದ್ದಾರೆ. ನಚಿಕೇತ ಎಂಬ ಯುವಕನ ಪಾತ್ರದಲ್ಲಿ ನಟಿಸಿರೋ ಪ್ರಸಾದ್, ಭಯದಿಂದ ಹೊರಬಂದು ಸಿಡಿದೆಳೋ ಅವತಾರ ತೋರಿಸ್ತಾರೆ. ಸಮಸ್ಯೆಗಳನ್ನ ಸಿನಿಮಾಟಿಕ್ ಆಗಿ ಹೇಳೊಕೆ ಸಾಧ್ಯನಾ ಎಂಬ ಪ್ರಶ್ನೆಗೆ, ಕಬಂಧ ಮನರಂಜನೆಗೆ ಮೋಸ ಮಾಡದೇ ಉತ್ತರ ಹೇಳುತ್ತಂತೆ.
‘ನೀವು ಸಾಕಷ್ಟು ಹಾರರ್ ಸಿನಿಮಾಗಳನ್ನ ನೋಡಿರ್ತಿರಾ.. ಕೃಷಿ ಆಧಾರಿತ ಕಥೆಗಳನ್ನೂ ಕೇಳಿರ್ತಿರಾ.. ಬಟ್, ನಮ್ಮದು ಇಲ್ಲಿ ಮಿಕ್ಸ್ ಮಸಾಲ, ಆಗಸ್ಟ್.9ಕ್ಕೆ ನೀವೆ ನೋಡಿ, ನಾವೇನೂ ಹೇಳಲ್ಲ’ ಅಂತಿರೋ ಕಬಂಧ ಟೀಮ್, ಪ್ಲಾಸ್ಟಿಕ್ ಯುಗದಲ್ಲಿ ನಾವೆಲ್ಲಾ ಹೇಗೆ ಕಳೆದುಹೋಗ್ತಿವಿ ಎಂಬುದನ್ನ ತೋರಿಸೋ ಉಮೇದಿನಲ್ಲಿದೆ.
ಸತ್ಯನಾಥ್ ಡೈರೆಕ್ಷನ್ ಹಾಗೂ ಭರವಸೆಯ ಮಾತುಗಳು ನಾವು ಒಂದೊಳ್ಳೆ ಸಿನಿಮಾ ಕೊಟ್ಟೇಕೊಡ್ತೀವಿ ಎಂಬುದನ್ನ ಹೇಳ್ತಿವೆ. ಐಟಿಬಿಟಿಯಲ್ಲೋ ಅಥವಾ ಯಾವುದೋ ಫಾರಿನ್ ಬೆಸಡ್ ಕಂಪೆನಿಯಲ್ಲೋ ಕೈ ತುಂಬಾ ಸಂಬಳ ಪಡೆದು ಆರಾಮಾಗಿ ಇರಬಹುದಾಗಿದ್ದ ಪ್ರಸಾದ್ ವಸಿಷ್ಠ, ಸಿನಿಮಾ ತಪಸ್ಸಿಗೋಸ್ಕರ ಎಲ್ಲವನ್ನೂ ಪಕ್ಕಕ್ಕಿಟ್ಟು ಅಗ್ನಿಪರೀಕ್ಷೆಗಿಳಿದಿದ್ದಾರೆ. ‘ಕಬಂಧ’ ಗೆಲ್ಲಲೇಬೇಕಾದ ಅನಿವಾರ್ಯತೆ ನಟನಾಗಿ ಪ್ರಸಾದ್ ಗಿದೆ.
ಪ್ರೇಕ್ಷಕರ ನಂಬಿಕೆಗಳನ್ನ ಉಳಿಸಿಕೊಳ್ಳೋ ‘ಪ್ರಾಮೀಸ್’ನ್ನ ಕಬಂಧ ಸಿನಿಮಾ ಕೊಡಬೇಕಾಗಿದೆ.
Be the first to comment