ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನಕ್ಕೆ ಕನ್ನಡ ಚಿತ್ರರಂಗ ಗಣ್ಯರು, ಕಿರುತೆರೆ ನಟ-ನಟಿಯರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
57ನೇ ವಯಸ್ಸಿನಲ್ಲಿ ನಟಿ ಅಪರ್ಣಾ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಬನಶಂಕರಿ ಎರಡನೇ ಹಂತದಲ್ಲಿರೋ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
”ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ನಟ ರಾಘವೇಂದ್ರ ರಾಜ್ಕುಮಾರ್, ”ನಮ್ಮ ಕುಟುಂಬ ಜೊತೆ ಅಪರ್ಣಾ ಬಾಂಧವ್ಯ ಚೆನ್ನಾಗಿತ್ತು. ಅಪ್ಪು100ನೇ ದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಪರ್ಣಾ, ವಿನಯ್ ಜೊತೆಗೆ ಗ್ರಾಮಾಯಣ ಸಿನಿಮಾದಲ್ಲೂ ನಟಿಸಿದ್ದರು. ಅಪರ್ಣಾ ನಮ್ಮ ಕುಟುಂಬಕ್ಕೆ ಬಹಳ ಬೇಕಾದವರು. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಇನ್ಸ್ ಪೆಕ್ಟರ್ ಸಿನಿಮಾದಲ್ಲೂ ನಟಿಸಿದ್ದರು. ಅವರ ಜೊತೆಗೆ ನಮ್ಮ ಬಾಂಧವ್ಯ ಚೆನ್ನಾಗಿತ್ತು” ಎಂದು ಸಂತಾಪ ಸೂಚಿಸಿದ್ದಾರೆ.
”ಅಪರ್ಣಾ ಸಾವಿನ ಸುದ್ದಿ ಕೇಳಿ ಬೇಸರವಾಯ್ತು. ಸಾವಿನ ಮುನ್ಸೂಚನೆ ಗೊತ್ತಿದ್ದರು ನಗುತ್ತಾ ಇದ್ರು” ಎಂದು ನಟ ದತ್ತಾ ಹೇಳಿದ್ದಾರೆ.
”ಅಪರ್ಣಾ ನಿಧನದ ಸುದ್ದಿ ಕೇಳಿ ನಿಜಕ್ಕೂ ಶಾಕಿಂಗ್ . ಅವರ ಆರೋಗ್ಯದ ಸಮಸ್ಯೆ ನಮಗೆ ಗೊತ್ತಿರಲಿಲ್ಲ. ಮೊದಲು ಅವರನ್ನ ನೋಡಿದ್ದು ದೂರದರ್ಶನದಲ್ಲಿ. ಶಾಲಾ ದಿನಗಳಿಂದಲೂ ಅವರ ನ್ಯೂಸ್ ನೋಡಿದ್ದೆ. ನಿರೂಪಕಿಯಾಗಿದ್ದ ಅಪರ್ಣಾ ಅವರನ್ನು ಸಾಕಷ್ಟು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೇನೆ. ಅವರ ಅಭಿಮಾನ ಪೂರ್ವಕ ನಗು, ಸ್ಪಷ್ಟ ಮಾತು ನಿಜಕ್ಕೂ ನಮಗೆ ಪ್ರೇರಣೆಯಾಗಿತ್ತು. ಆಕೆ ಇಲ್ಲದ ನೋವನ್ನ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ” ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
Be the first to comment