ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಎಂದ ನಿರ್ದೇಶಕ!

ಒಟಿಟಿಗೆ ಬದಲಿಗೆ ಯೂಟ್ಯೂಬ್​ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಎಂದು ನಿರ್ದೇಶಕ ಪವನ್ ಕುಮಾರ್ ಕನ್ನಡದ ಸಣ್ಣ ಬಜೆಟ್ ಸಿನಿಮಾ ನಿರ್ಮಾಪಕ, ನಿರ್ದೇಶಕರಿಗೆ ಸಲಹೆ ಕೊಟ್ಟಿದ್ದಾರೆ.

ಒಟಿಟಿಗಳು ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಚರ್ಚೆ ನಡುವೆ ಲೂಸಿಯಾ ಪವನ್ ಈ ಸಲಹೆ ನೀಡಿದ್ದಾರೆ.

”ನಾವೇಕೆ ನಮ್ಮ ಸಿನಿಮಾಗಳನ್ನು ಒಟಿಟಿಗಳಿಗೆ ಮಾರಬೇಕು? ಸಿನಿಮಾ ಕೊಳ್ಳುವಂತೆ ಅಂಗಲಾಚಬೇಕು? ಅದರ ಬದಲಿಗೆ ಯೂಟ್ಯೂಬ್​ಗೆ ಸಿನಿಮಾ ಹಾಕೋಣ. ಇದರಿಂದ ಒಟಿಟಿಗಿಂತಲೂ ಹೆಚ್ಚಿನ ಲಾಭವನ್ನು ಪಡೆಯಬಹುದು” ಎಂದು ಹೇಳಿದ್ದಾರೆ.

”ಯೂಟ್ಯೂಬ್​ನಲ್ಲಿ ಸಿನಿಮಾ ಹಾಕಿ. ಅಲ್ಲಿ ನಿಮ್ಮ ಕ್ಯೂ ಆರ್ ಕೋಡ್ ನ್ನು ಸಹ ಸೇರಿಸಿ. ಯಾರ್ಯಾರು ಸಿನಿಮಾ ನೋಡುತ್ತಾರೋ ಅವರಿಗೆ ಆ ಸಿನಿಮಾದ ಮೌಲ್ಯ ಎಷ್ಟು ಅನಿಸುತ್ತದೆಯೋ ಅಷ್ಟು ಹಣ ಹಾಕಲಿ. ಒಬ್ಬರು 10 ರೂಪಾಯಿ ಹಾಕಬಹುದು, ಒಬ್ಬರು 100 ರೂಪಾಯಿ ಹಾಕಬಹುದು. ಕನ್ನಡದಲ್ಲಿ ಇತ್ತೀಚೆಗೆ ಬಂದ ಆ ಒಂದು ಸಣ್ಣ ಸಿನಿಮಾಕ್ಕೆ 30 ಲಕ್ಷ ಬಂಡವಾಳ ಹೂಡಲಾಗಿದೆ. ಹಾಗಿದ್ದರೆ ಆ ಬಂಡವಾಳವನ್ನು ಆತ ವಾಪಸ್ ಪಡೆಯುವುದು ಹೇಗೆ? ಅದಕ್ಕೆ ಇರುವ ದಾರಿ  ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿ ಅದರಿಂದ ಹಣ ಗಳಿಸುವುದು” ಎಂದಿದ್ದಾರೆ.

”ನಾನು ನಿರ್ದೇಶಿಸಿದ ‘ಧೂಮಂ’ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ.  ಸಿನಿಮಾದ ಕನ್ನಡ ಮತ್ತು ಮಲಯಾಳಂ ಆವೃತ್ತಿಯನ್ನು ನಾವು ಒಂದು ತಿಂಗಳ ಹಿಂದೆ ಯೂಟ್ಯೂಬ್​ನಲ್ಲಿ ಉಚಿತ ವೀಕ್ಷಣೆಗೆ ಹಾಕಿದೆವು. ಮಲಯಾಳಂ ಆವೃತ್ತಿಯನ್ನು 20 ಲಕ್ಷ ಜನ ನೋಡಿದ್ದಾರೆ. ಕನ್ನಡ ಆವೃತ್ತಿಯನ್ನು 4 ಜನ ನೋಡಿದ್ದಾರೆ.  ಕ್ಯೂಆರ್ ಕೋಡ್ ಸಮೇತ ಸಿನಿಮಾ ಹಾಕಿ ಒಬ್ಬರು 100 ರೂಪಾಯಿ ಹಾಕಿದ್ದರೆ ನಮಗೆ 24 ಕೋಟಿ ಗಳಿಕೆ ಆಗಿರುತ್ತಿತ್ತು. ಒಂದು ಭರ್ಜರಿ ಸಿನಿಮಾವನ್ನು ಅದರಿಂದ ಮಾಡಬಹುದಿತ್ತು. ಆದರೆ ಹೊಂಬಾಳೆಗೆ ಕ್ಯೂ ಆರ್ ಕೋಡ್ ಅವಶ್ಯಕತೆ ಇರಲಿಲ್ಲ ಹಾಗಾಗಿ ಅವರು ಹಾಕಲಿಲ್ಲ” ಎಂದಿದ್ದಾರೆ ಪವನ್ ಕುಮಾರ್.

”ಇತ್ತೀಚೆಗಷ್ಟೆ ಕನ್ನಡದ ಒಂದು ಸಿನಿಮಾ ಬಿಡುಗಡೆ ಆಯ್ತು. ನಾನೂ ಆ ಸಿನಿಮಾವನ್ನು ಬೆಂಬಲಿಸಿದ್ದೆ. ದೊಡ್ಡ ನಟರ ಸಿನಿಮಾ ಅಲ್ಲದ ಕಾರಣ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಒಟಿಟಿಗಳವರು ಯಾರೂ ಅದನ್ನು ತೆಗೆದುಕೊಳ್ಳಲಿಲ್ಲ. ನಿಜಕ್ಕೂ ಅದೊಂದು ನೋಡಬೇಕಾಗಿರುವ ಸಿನಿಮಾ. ಇಂಥ ಸಿನಿಮಾ ಮಾಡುವವರಿಗೆ ನನ್ನ ಸಲಹೆ ನೀವೇಕೆ ಒಟಿಟಿಗಳಿಗೆ ಮಾರಬೇಕೆಂದು ಹಠಪಡುತ್ತೀರಿ?ನಿಮ್ಮ ಸಿನಿಮಾಗಳನ್ನು ನೇರವಾಗಿ ಯೂಟ್ಯೂಬ್​ನಲ್ಲಿ ಹಾಕಿ ಹಣ ಗಳಿಸಿ” ಎಂದಿದ್ದಾರೆ ಪವನ್.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!