ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿರುವ, ಅಂಬರೀಶ್ ಎಂ ನಿರ್ದೇಶನದ ಹಾಗು ಅಜಯ್ ಪೃಥ್ವಿ, ರಚನಾ ಇಂದರ್ ನಾಯಕ, ನಾಯಕಿಯಾಗಿ ನಟಿಸಿರುವ “ನಾಟ್ ಔಟ್” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಹನೀಫ್ ಮೂವರು ಸೇರಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಹೊಸ ಯೋಜನೆಗೆ “ನಾಟ್ ಔಟ್” ಚಿತ್ರತಂಡ ಕೈ ಹಾಕಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾದ ಗುಣಮಟ್ಟವನ್ನು ದೃಢ.ಪಡಿಸುವ ಉದ್ದೇಶದಿಂದ. ಫಸ್ಟ್ ಆಫ್ ಸಿನಿಮಾ ಉಚಿತವಾಗಿ ಪ್ರೇಕ್ಷಕರಿಗೆ ನೋಡಲು ಅವಕಾಶ. ಸೆಕೆಂಡ್ ಹಾಫ್ ಸಿನಿಮಾ ನೋಡುವ ಕುತೂಹಲ ಇದರೆ ಮಧ್ಯಂತರದಲ್ಲಿ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ.
ಟ್ರೇಲರ್ ಬಿಡುಗಡೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
“ನಾಟ್ ಔಟ್” ಲಾಕ್ ಡೌನ್ ನಲ್ಲಿ ನಾನು ಬರೆದ ಕಥೆ ಎಂದು ಮಾತನಾಡಿದ ನಿರ್ದೇಶಕ ಅಂಬರೀಶ್, ನನ್ನ ಕಥೆಯನ್ನು ಮೆಚ್ಚಿ ರಾಷ್ಟ್ರಕೂಟ ಪಿಕ್ಚರ್ಸ್ ಅವರು ನಿರ್ಮಾಣಕ್ಕೆ ಮುಂದಾದರು. ಟೊರೊಂಟೊದಲ್ಲಿ ಅಭಿನಯ ಕಲಿತು ಬಂದಿರುವ ಅಜಯ್ ಪೃಥ್ವಿ, ರಚನಾ ಇಂದರ್, ರವಿಶಂಕರ್, ಕಾಕ್ರೋಜ್ ಸುಧೀ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ನ ಚಿತ್ರವಾಗಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು.
ನನ್ನದು ಈ ಚಿತ್ರದಲ್ಲಿ ಆಂಬುಲೆನ್ಸ್ ಚಾಲಕನ ಪಾತ್ರ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ನನ್ನ ಪಾತ್ರವನ್ನು ಎಲ್ಲಾ ಆಂಬುಲೆನ್ಸ್ ಚಾಲಕರಿಗೆ ಅರ್ಪಿಸುತ್ತಿದ್ದೇನೆ ಎಂದು ನಾಯಕ ಅಜಯ್ ಪೃಥ್ವಿ ತಿಳಿಸಿದರು.
ನನ್ನದು ಈ “ನಾಟ್ ಔಟ್” ನಲ್ಲಿ ನರ್ಸ್ ಪಾತ್ರ ಎಂದರು ರಚನಾ ಇಂದರ್. ಕಾಕ್ರೋಜ್ ಸುಧೀ, ಅಶ್ವಿನ್ ಹಾಸನ್, ಪ್ರಶಾಂತ್ ಸಿದ್ದಿ, ಸಲ್ಮಾನ್ ಮುಂತಾದ ಕಲಾವಿದರು ಹಾಗೂ ಕಾರ್ಯಕಾರಿ ನಿರ್ಮಾಪಕ ಕುಮಾರ್ ಚಿತ್ರದ ಕುರಿತು ಮಾಹಿತಿ ನೀಡಿದರು.
Be the first to comment