‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ಬಳಗಕ್ಕೆ  ಹಿರಿಯ ನಟಿ ಸುಧಾರಾಣಿ ಸೇರಿಕೊಂಡಿದ್ದಾರೆ.

ಸುಧಾರಾಣಿ,  ನಿವೇದಿತಾ ನಿರ್ಮಾಣದ ಮೊದಲ ಸಿನಿಮಾದ ಭಾಗವಾಗಿದ್ದಾರೆ. ಅವರು ಪದ್ಮಾ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಸುಧಾರಾಣಿ  ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತಾಡಿರುವ ಸುಧಾರಾಣಿ, ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು. ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ. ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್ ವರೆಗೂ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕನ್ನಡದ ಕಲಾಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು. ನಿರ್ದೇಶಕರಿಗೆ ಸ್ವಲ್ಪ ಮುಜುಗರ ಇತ್ತು. ನನ್ನ ಇಷ್ಟು ಚಿಕ್ಕ ಪಾತ್ರ ಕೇಳಬೇಕು ಅಂತ. ಆದ್ರೆ ಚೊಚ್ಚಲ ನಿರ್ದೇಶಕರಾಗಿ ಅವರಲ್ಲಿದ್ದ ಹುಮ್ಮಸ್ಸು, ಆಸಕ್ತಿ ನನಗೆ ಇಷ್ಟ ಆಯಿತು. ಸಂಬಂಧಗಳ ಬಗ್ಗೆ ಅವರು ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು, ನೋಡಿ ಇಷ್ಟವಾಗುವಂತ ಚಿತ್ರವನ್ನು ಮಾಡಿದ್ದಾರೆ’ ಎಂದಿದ್ದಾರೆ.

‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ. ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ,  ಅಭಿಲಾಷ್ ಕಳತ್ತಿ ಛಾಯಾಗ್ರಹಣ,  ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!