ಇಂದು ಗೆಲುವಿನ ನಿರೀಕ್ಷೆಯಲ್ಲಿ ಹೊಸ ಕಲಾವಿದರ ಕೆಲ ಚಿತ್ರಗಳು ಬಿಡುಗಡೆ ಆಗಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಎದುರು ನೋಡುತ್ತಿವೆ.
ಚಿಲ್ಲಿ ಚಿಕನ್:
ಬೆಂಗಳೂರಿನ ಚೈನೀಸ್ ಹೋಟೆಲ್‌ನಲ್ಲಿ ನಡೆಯುವ ಘಟನೆಗಳ ಸುತ್ತ ಸಾಗುವ ಚಿತ್ರವಿದು. ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರು ನಿರ್ಮಿಸಿರುವ ಚಿತ್ರಕ್ಕೆ ಪ್ರತೀಕ್ ಪ್ರಜೋಶ್ ನಿರ್ದೇಶನವಿದೆ.
ಇದು ಹೊಸ ಕಲಾವಿದರಿಂದ ಕೂಡಿದ ಚಿತ್ರ. ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐದು ಹುಡುಗರು ಬೆಂಗಳೂರಿನಲ್ಲಿ ಚೈನೀಸ್ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ ಎಂಬುದೇ ಚಿತ್ರದ ಕಥೆ.
ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ ಮುಂತಾದವರು ತಾರಾಗಣದಲ್ಲಿದ್ದಾರೆ. ಸಿದ್ಧಾಂತ್ ಸುಂದರ್ ಸಂಗೀತ, ಶ್ರೀಶ್ ತೋಮರ್ ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ ಚಿತ್ರಕ್ಕಿದೆ.
ಸಂಭವಾಮಿ ಯುಗೇ ಯುಗೇ:
ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕು ಎಂಬ ಸಂದೇಶ ಹೊತ್ತ ಸಿನಿಮಾ ‘ ಸಂಭವಾಮಿ ಯುಗೇ ಯುಗೇ’. ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರತಿಭಾ ನಿರ್ಮಿಸಿರುವ ಚಿತ್ರಕ್ಕೆ ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಹೊಸಬರಾದ ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಹಳ್ಳಿಯ ಹುಡುಗರು ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಹಳ್ಳಿಗಳು ಉಳಿಯುವುದಾದರೂ ಹೇಗೆ ಎಂಬ ಕಥೆ ಚಿತ್ರದಲ್ಲಿದೆ.
Be the first to comment