ಸ್ಯಾಂಡಲ್ವುಡ್ ನಿರ್ದೇಶಕಿ, ನಟಿ ರೂಪಾ ಅಯ್ಯರ್ ಗೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಆನ್ಲೈನ್ ಕಳ್ಳರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿ ಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ವಂಚಕರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಅಯ್ಯರ್ ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಅಪರಾಧಿಗಳು ಹಣಕ್ಕೆ ಬೇಡಿಕೆ ಇಟ್ಟ ಕೂಡಲೇ ಎಚ್ಚೆತ್ತ ರೂಪಾ ಅಯ್ಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ (ಮೇ 8) ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆ ತನಕ ತಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಆನ್ಲೈನ್ ಕಳ್ಳರು ವಿಡಿಯೋ ಕಾಲ್ನಲ್ಲೇ ಇದ್ದು ಮನೆಯಿಂದ ಹೊರಗೆ ಬರದಂತೆ ತಡೆ ಹಿಡಿದಿದ್ದಾರೆ ಎಂದು ರೂಪಾ ಹೇಳಿದ್ದಾರೆ.
”ಬುಧವಾರ ಮಧ್ಯಾಹ್ನ ಅಪರಿಚಿತ ನಂಬರ್ನಿಂದ ಕರೆ ಬಂತು. ತಾವು ಸಿಸಿಬಿ ಅಧಿಕಾರಿಗಳೆಂದು ಕರೆ ಮಾಡಿದ್ದವರು ತಿಳಿಸಿದರು. ಗಾಬರಿಯಿಂದ ಯಾಕೆಂದು ಪ್ರಶ್ನಿಸಿದೆ. ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್ನಲ್ಲಿ ನಿಮ್ಮ ಹೆಸರಿದೆ. ಹೀಗಾಗಿ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದರು.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ 247 ಮಂದಿಯನ್ನು ಗುರುತಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರ ಮೂಲಕ ದೇಶದ್ರೋಹದ ಚಟುವಟಿಕೆ ನಡೆಸಲಾಗಿದೆ. ಈಗಾಗಲೇ ಈ ಕುರಿತು ಮುಂಬೈಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕರೆ ಮಾಡಿದ್ದವರು ಹೆದರಿಸಿದ್ದರು. ಇದರಿಂದ ಗಾಬರಿಯಾಯಿತುʼʼ ಎಂದು ರೂಪಾ ಘಟನೆಯ ವಿವರ ನೀಡಿದ್ದಾರೆ.
”ನೀವು ಸೆಲೆಬ್ರಿಟಿ ಆಗಿರುವುದರಿಂದ ನಾವು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಒಂದು ವೇಳೆ ಈ ಪ್ರಕರಣದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದಾದರೆ 30 ಲಕ್ಷ ರೂ. ನೀಡಿ ಎಂದು ಕರೆ ಮಾಡಿದ್ದವರು ಹೇಳಿದರು. ಯಾವಾಗ ಅವರು ಹಣದ ಬೇಡಿಕೆ ಇಟ್ಟರೋ ಆಗ ಅನುಮಾನ ಶುರುವಾಯ್ತು. ಕೂಡಲೇ ಎಚ್ಚೆತ್ತು ಸೈಬರ್ ಕ್ರೈಂಗೆ ದೂರು ನೀಡಿದೆʼʼ ಎಂದು ರೂಪಾ ಹೇಳಿದ್ದಾರೆ.
”ಆನ್ಲೈನ್ ವಂಚಕರು ಪ್ರಭಾವಿಗಳನ್ನು ಯಾಮಾರಿಸಿ ಹಣ ದೋಚಲು ಮುಂದಾಗಿದ್ದಾರೆ. ವಂಚಕರು ನನ್ನನ್ನು ನಂಬಿಸಲು ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕೂಡ ಕಳುಹಿಸಿದ್ದಾರೆ. ಒಂದು ವೇಳೆ ಅವರ ಮಾತನ್ನು ನಂಬಿದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗಿತ್ತುʼʼ ಎಂದು ರೂಪಾ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
Be the first to comment