‘ಮತದಾರ ಪ್ರಭುಗಳು’ ಸಿನಿಮಾ ಪ್ರಸಾರಕ್ಕೆ ತಡೆ

 ‘ಮತದಾರ ಪ್ರಭುಗಳು’ ಸಿನಿಮಾದ ಪ್ರಾಯೋಜಿತ ಪ್ರಸಾರಕ್ಕೆ ಅವಕಾಶ ನೀಡಬೇಕು ಎಂದು ದೂರದರ್ಶನದ ಮಹಾನಿರ್ದೇಶಕರಿಗೆ ಸಿನಿಮಾದ ನಿರ್ದೇಶಕ, ನಿರ್ಮಾಪಕರೂ ಆಗಿರುವ ಅನಂತರಾಯಪ್ಪ ದೂರು ನೀಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಸಿನಿಮಾದ  ಪ್ರಸಾರತಡೆ ಹಿಡಿದಿರುವ ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥರು, ಉಪ ಮಹಾನಿರ್ದೇಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅನಂತರಾಯಪ್ಪ ಹೇಳಿದ್ದಾರೆ.

”₹85 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರಮಂದಿರಗಳು ಸಿಗದ ಕಾರಣ ಚಂದನ ವಾಹಿನಿ ಮೂಲಕ ಪ್ರಾಯೋಜಿತ ಪ್ರಸಾರಕ್ಕೆ ನಿರ್ಧರಿಸಿದ್ದೆವು. ಕೋಮುದ್ವೇಷ ಕೆರಳಿಸುವ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಕೇರಳ ದೂರದರ್ಶನ ಏಪ್ರಿಲ್‌ 5ರಂದು ಪ್ರಸಾರ ಮಾಡಿದೆ. ನಮ್ಮ ಸಿನಿಮಾದ ಯಾವ ಭಾಗದಲ್ಲಿಯೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ಆದರೂ ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಬೆಂಗಳೂರು ದೂರದರ್ಶನದ ಅಧಿಕಾರಿಗಳು ಸಿನಿಮಾ ತಡೆಹಿಡಿದಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

”ಸಿನಿಮಾದ ಕಥೆ ಕೇವಲ ಕಾಲ್ಪನಿಕ. ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣಿಯ ಹೆಸರನ್ನು ಸಿನಿಮಾದಲ್ಲಿ ಸೇರಿಸಿಲ್ಲ. ಈ ಬಗ್ಗೆ ಸಿನಿಮಾದ ಆರಂಭದಲ್ಲಿಯೇ ತಿಳಿಸಲಾಗಿದೆ. ಈ ಸಿನಿಮಾವನ್ನು ಪ್ರಸಾರ ಮಾಡುವುದರಿಂದ ಆಗುವ ಪ್ರಯೋಜನವನ್ನು ಪೂರ್ವ ವೀಕ್ಷಣೆ ಸಮಿತಿಯ ಸದಸ್ಯರು ಗುರುತಿಸುವ ಬದಲು, ರಾಜಕೀಯ ಪಕ್ಷಗಳ ಬಗ್ಗೆ ‌ವಿಶೇಷ ಕಾಳಜಿ ತೋರಿಸಿ, ರಾಜಕೀಯ ಪ್ರೇರಿತ ವರದಿ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಸಂವಿಧಾನವೇ ಅವಕಾಶ ಕಲ್ಪಿಸಿದ್ದರೂ ಪಕ್ಷೇತರರಿಗೆ ಮತ ಹಾಕುವಂತೆ ಹೇಳುವುದು ಒಕ್ಕೂಟ ವ್ಯವಸ್ಥೆಗೆ ಸರಿಯಲ್ಲ ಎಂದು ನೀಡಿರುವ ಶಿಫಾರಸು ಸಂವಿಧಾನ ವಿರೋಧಿಯಾಗಿದೆ. ನಮ್ಮ ಆಕ್ಷೇಪಣೆ ಪರಿಗಣಿಸದೆ ಸಮಿತಿ ನೀಡಿದ ದೋಷಪೂರಿತ ವರದಿಯನ್ನು ಒಪ್ಪಿಕೊಂಡು ಸಿನಿಮಾ ಪ್ರಸಾರವನ್ನು ತಡೆಹಿಡಿಯಲಾಗಿದೆ’ ಎಂದಿದ್ದಾರೆ.

”ಸಿನಿಮಾ ಯೂ ಟ್ಯೂಬ್‌ನಲ್ಲಿ ಲಭ್ಯವಿದ್ದು, 4 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪೂರ್ವವೀಕ್ಷಣೆ ಸಮಿತಿಯ ಸದಸ್ಯರು ಸಿನಿಮಾ ಬಗ್ಗೆ ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು” ಎಂದು ಅವರು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!