ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹೊರ ನಡೆದಿದ್ದಾರೆ.
‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಇದೇ ತಿಂಗಳಿಂದ ಶುರುವಾಗಲಿದೆ. ಈಗಾಗಲೇ ಸಿನಿಮಾದ ತಾರಾಂಗಣದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಯಶ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಜೋಡಿಯಾಗಲಿದ್ದಾರೆ ಎನ್ನಲಾಗಿದೆ.
ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿಗೆ ಇದು ಚೊಚ್ಚಲ ಕನ್ನಡ ಸಿನಿಮಾವಾಗಲಿದೆ. ಟಾಕ್ಸಿಕ್ ಚಿತ್ರದಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಹಿಂದಿ ನಟ ನವಾಜುದ್ದೀನ್ ಸಿದ್ದಿಕ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಟಾಕ್ಸಿಕ್ ಸಿನಿಮಾದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಕರೀನಾ ಕಪೂರ್ ಕ್ರೂ ಚಿತ್ರದಲ್ಲಿ ನಟಿಸಿದ್ದು, ಸದ್ಯ ಸಿಂಗಂ ಅಗೇನ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾದ ಇತರ ಪಾತ್ರವರ್ಗದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಘೋಷಣೆ ಮಾಡಲು ಯೋಜಿಸಿದೆ.
ಟಾಕ್ಸಿಕ್ ಚಿತ್ರಕ್ಕೆ ಸಂಗೀತ ಸಂಯೋಜಕ ಜೆರೆಮಿ ಸ್ಟಾಕ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಸಿನಿಮಾದ ದೃಶ್ಯಗಳನ್ನು ಛಾಯಾಗ್ರಹಕ ರಾಜೀವ್ ರವಿ ಸೆರೆಹಿಡಿಯಲಿದ್ದಾರೆ. ಇದು ಪ್ಯಾನ್ ವರ್ಲ್ಡ್ ಚಿತ್ರವಾಗಿ ಮುಂದಿನ ವರ್ಷ ತೆರೆಕಾಣಲಿದೆ.
ಈ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದು, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.
ಕನ್ನಡ ಸಿನಿಮಾಗಳ ಜನಪ್ರಿಯತೆಯಿಂದಾಗಿ ಚಂದನವನದಲ್ಲಿ ನಟಿಸಲು ಬಾಲಿವುಡ್ನ ಹಲವಾರು ನಟಿಮಣಿಯರು ಮುಂದಾಗುತ್ತಿದ್ದಾರೆ.
—-
Be the first to comment