ಅಣ್ಣಾಮಲೈ ನಟಿಸಿರುವ ‘ಅರಬ್ಬಿ’ ಟ್ರೈಲರ್ ಬಿಡುಗಡೆ

ಮಾಜಿ ಐಪಿಎಸ್ ಅಧಿಕಾರಿ, ಹಾಲಿ ಬಿಜೆಪಿ ಮುಖಂಡ ಅಣ್ಣಾಮಲೈ ಮೊದಲ ಬಾರಿಗೆ ನಟಿಸಿರುವ ಕನ್ನಡ ಸಿನಿಮಾ ‘ಅರಬ್ಬಿ’  ಟ್ರೈಲರ್ ಬಿಡುಗಡೆ ಆಗಿದೆ.

ಎರಡೂ ಕೈಗಳಿಲ್ಲದಿದ್ದರೂ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿರುವ ಕನ್ನಡಿಗ ಕೆಎಸ್ ವಿಶ್ವಾಸ್ ಅವರ ಜೀವನದ ಬಗ್ಗೆ ‘ಅರಬ್ಬಿ’  ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ತಮ್ಮ ಪಾತ್ರದಲ್ಲಿ ವಿಶ್ವಾಸ್ ತಾವೇ ನಟಿಸಿದ್ದಾರೆ. ಕೈಗಳು ಇಲ್ಲದ ಅವರು ಅದೆಲ್ಲವನ್ನೂ ಮೆಟ್ಟಿನಿಂತು ಹೇಗೆ ಸಾಧನೆ ಮಾಡಿದರು? ಅವರಿಗೆ ಸ್ಪೂರ್ತಿ ಏನು? ಎಂಬಿತ್ಯಾದಿ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ.

ವಿಶ್ವಾಸ್​ರ ತರಬೇತುದಾರನ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಅಣ್ಣಾಮಲೈ ಕೆಲವು ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್​ನಲ್ಲಿಯೂ ಅಣ್ಣಾಮಲೈ ಕಾಣಿಸಿಕೊಂಡಿದ್ದು, ಅನುಭವಿಯಂತೆ ಅಣ್ಣಾಮಲೈ ನಟಿಸಿದ್ದಾರೆ.

ಕೆಎಸ್ ವಿಶ್ವಾಸ್ ವಿದ್ಯುತ್ ಅವಘಡವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಆದರೆ ಛಲ ಬಿಡದೆ, ಅಂತರಾಷ್ಟ್ರೀಯ ಈಜುಗಾರರಾಗಿದ್ದಾರೆ. ಕೈಯಿಲ್ಲದ್ದನ್ನು ಕೊರತೆ ಎಂದುಕೊಳ್ಳದೆ ಸಾಧನೆಗೆ ಸ್ಪೂರ್ತಿ ಎಂದುಕೊಂಡಿರುವ ವಿಶ್ವಾಸ್ ಅವರ ಜೀವನ-ಸಾಧನೆ  ‘ಅರಬ್ಬಿ’ ಮೂಲಕ ತೆರೆಗೆ ಬರುತ್ತಿದೆ.

ಅರಬ್ಬಿ’ ಸಿನಿಮಾವನ್ನು ಆರ್ ರಾಜ್​ಕುಮಾರ್ ನಿರ್ದೇಶನ ಮಾಡಿದ್ದು, ಸಿಎಸ್ ಚೇತನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸಹ ನಿರ್ಮಾಣವನ್ನು ಅನಿತಾ ಸಿದ್ಧೇಶ್ವರ್ ಮಾಡಿದ್ದಾರೆ. ಕಂಬದ ರಂಗ ಸಂಗೀತ ನೀಡಿದ್ದಾರೆ. ಕ್ಯಾಮೆರಾ ಆನಂದ್ ದಿಂಡ್​ವಾರ್, ಎಡಿಟಿಂಗ್ ವಿಶ್ವ ಮಾಡಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!