‘ಮಾತುಕತೆ ವಿನಯ್ ಜೊತೆ’ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಅಭಿಮಾನ ಗಳಿಸಿದ್ದ ವಿನಯ ಭಾರದ್ವಾಜ್ ಇದೀಗ ಹಿರಿತೆರೆ ಪ್ರೇಕ್ಷಕರನ್ನು ಕೂಡ ತಮ್ಮತ್ತ ಸೆಳೆಯಲು ಸಿದ್ಧರಾಗಿದ್ದಾರೆ. ನಿರೂಪಣೆಯಿಂದ ಕಿರುಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ವಿನಯ್ ಇದೀಗ ತಮ್ಮ ಮುಂದಿನ ಗುರಿ ಯಾವುದಾಗಿತ್ತು ಎನ್ನುವುದನ್ನು ‘ಮುಂದಿನ ನಿಲ್ದಾಣ’ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಹೌದು, ಈ ಚಿತ್ರಕ್ಕೆ ವಿನಯ್ ಭಾರದ್ವಾಜ್ ನಿರ್ದೇಶಕ.
‘ರೆಡ್ ಚಿಲ್ಲೀಸ್‘ ಸಹಯೋಗ ವಿನಯ್ ಕನ್ನಡ ಮಾತ್ರವಲ್ಲ, ಮುಂಬೈನ ಮಾಧ್ಯಮಗಳಲ್ಲಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ನಿರೂಪಿಸುವ ಮೂಲಕ ಗಮನ ಸೆಳೆದವರು. ಹಾಗಾಗಿ ಚಿತ್ರ ಕೂಡ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ತೆಗೆಯಬೇಕು ಎನ್ನುವ ಆಕಾಂಕ್ಷೆ ಹೊಂದಿದವರು. ಅದಕ್ಕೆ ತಕ್ಕಂತೆ ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್’ ನಂಥ ಜಾಗತಿಕ ಸಂಸ್ಥೆ ತಮ್ಮ ಈ ಕನ್ನಡ ಚಿತ್ರದ ಜೊತೆಗೆ ಸಹಯೋಗ ನಡೆಸಲು ತಯರಾಗಿರುವುದು ಖುಷಿ ತಂದಿದೆ ಎಂದು ವಿನಯ್ ತಿಳಿಸಿದರು. ಈ ಚಿತ್ರದ ಮೂಲಕ ಇಂದಿನ ಕಾಲಘಟ್ಟದಲ್ಲಿ ಡೆಫಿನೇಶನ್ ಆಫ್ ಲವ್ ಹೇಗೆ ಬದಲಾಗಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಿದ್ದೇನೆ. ಆದರೆ ಈ ಚಿತ್ರವನ್ನು ಮನೆ ಹಿರಿಯರು ಕೂಡ ಕುಟುಂಬ ಸಮೇತ ನೋಡಬಹುದಾಗಿದ್ದು, ಜನರೇಶನ್ ಗ್ಯಾಪ್ ಗೆ ಕಾರಣವೇನು ಎಂದು ತಮ್ಮೊಳಗೆ ಅವಲೋಕನ ನಡೆಸಲು ಸಹಾಯಕವಾಗಲಿದೆ ಎಂದರು.
ಪ್ರವೀಣ್ ಮತ್ತು ರಾಧಿಕಾ ಜೋಡಿ ಇತ್ತೀಚೆಗಷ್ಟೇ ‘ಚೂರಿಕಟ್ಟೆ’ ಚಿತ್ರದ ಮೂಲಕ ಗಮನ ಸೆಳೆದ ಪ್ರವೀಣ್ ತೇ ಜ್, ಈ ಸಿನಿಮಾದ ನಾಯಕರಾಗಿದ್ದಾರೆ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ರಂಗಿತರಂಗದ ಬೆಡಗಿ ರಾಧಿಕಾ ಚೇತನ್ ಇದ್ದಾರೆ. ತಾವು ಇದುವರೆಗೆ ನಟಿಸಿರದಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ರಾಧಿಕಾ ಹೇಳಿದರು. ಪ್ರವೀಣ್ ಮಾತನಾಡಿ “ಚಿತ್ರದಲ್ಲಿ ತಮ್ಮ ಜೀವನದ ಮೂರು ಕಾಲಘಟ್ಟದ ಕತೆಯಿದ್ದು, ಇದರಲ್ಲಿ ತನಗೆ ಇಬ್ಬರು ಜೋಡಿಗಳಿದ್ದಾರೆ” ಎಂದು ಮತ್ತೋರ್ವ ನಟಿ ಅನನ್ಯಾ ಕಡೆಗೆ ನೋಡಿದರು.ನೀರ್ದೋಸೆ ಚಿತ್ರದಲ್ಲಿ ಬಾಲನಟಿಯಾಗಿದ್ದ ಅನನ್ಯಾ ಕಶ್ಯಪ್ ಚಿತ್ರದ ಮತ್ತೋರ್ವ ನಾಯಕಿ ಎನ್ನಬಹುದು.
ಚಿತ್ರದ ನಿರ್ಮಾಣಕ್ಕೆ ಮುಂದಾಗಿರುವ ನಾಲ್ವರು ನಿರ್ಮಾಪಕರಲ್ಲಿ ಒಬ್ಬರಾದ ಮುರಳೀಧರ ಅವರು ಮಾಧ್ಯಮಗೋಷ್ಠಿಯನ್ನು ನಿರೂಪಿಸಿದರು. ತಾರಾನಾಥ್ ಸ್ವಾಗತಿಸಿದರು. ಡಾ. ಸುರೇಶ್ ಮಾತನಾಡಿ ಕನ್ನಡ ಭಾಷೆಯ ಮೇಲಿನ ವ್ಯಾಮೋಹವೇ ಕನ್ನಡದಲ್ಲಿ ಒಂದು ಚಿತ್ರ ಮಾಡುವಂಥ ಆಕಾಂಕ್ಷೆ ತಂದು ಕೊಟ್ಟಿತು ಎಂದರು. ಮತ್ತೋರ್ವ ನಿರ್ಮಾಪಕ ಶೇಷಾದ್ರಿ ಕೂಡ ಉಪಸ್ಥಿತರಿದ್ದರು. ವಿದೇಶ ನಿವಾಸಿಗಳಾಗಿರುವ ಇವರೆಲ್ಲ ಸೇರಿ ತಮ್ಮ ನಿರ್ಮಾಣ ಸಂಸ್ಥೆಗೆ ‘ಕೋಸ್ಟಲ್ ಬ್ರಿಜ್ ಪ್ರೊಡಕ್ಷನ್ಸ್ ‘ ಎಂದು ನಾಮಕರಣ ಮಾಡಿದೆ.ತಂಡದ ಹಿತೈಷಿಯಾಗಿ ಹಿರಿಯ ನಿರ್ದೇಶಕ ಬಿ.ರಾಮಮೂರ್ತಿಯವರು ಬಂದು ಶುಭ ಹಾರೈಸಿದರು.
Be the first to comment