ರಾಜ್ ಪತ್ತಿಪಾಟಿ ನಿರ್ದೇಶನದ ಪ್ರಥಮ ಚಿತ್ರವೇ ಕಾಣದಂತೆ ಮಾಯವಾದನು. ಜಯಮ್ಮನ ಮಗ ಎನ್ನುವ ಯಶಸ್ವೀ ಚಿತ್ರವನ್ನು ನೀಡಿದ ಬಳಿಕ ಕಾಣದಂತೆ ಮಾಯವಾಗಿದ್ದ ನಿರ್ದೇಶಕ ವಿಕಾಸ್, ಈ ಚಿತ್ರದ ಮೂಲಕ ಮರಳಿದ್ದಾರೆ. ಆದರೆ ಚಿತ್ರದಲ್ಲಿ ಅವರೇ ನಾಯಕ ಎನ್ನುವುದು ವಿಶೇಷ. ಸಿಂಧು ಈಗ ಸಮಾಜ ಸೇವಕಿ ನೀನಾಸಂ ಸತೀಶ್ ಜೋಡಿಯಾಗಿ ಗಮನ ಸೆಳೆದಂಥ ಚೆಲುವೆ ಸಿಂಧು ಲೋಕನಾಥ್. ಇದೀಗ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಂದನಾ ಎಂಬ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎನ್ ಜಿ ಒ ದಲ್ಲಿ ಕೆಲಸ ಮಾಡುವ ಹುಡುಗಿಯಾಗಿ ನಟಿಸಿದ್ದಾರೆ ಸಿಂಧು. ‘ರಾಮರಾಮ ರೇ’ ಖ್ಯಾತಿಯ ಹಾಸ್ಯನಟ ಧರ್ಮಣ್ಣ ತಾವು ಇದುವರೆಗೆ ಯಾವ ಚಿತ್ರಗಳಲ್ಲಿ ಕೂಡ ಕಾಣಿಸಿರದಂಥ ರೀತಿಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.
ಸೀತಾ – ಬಾಬು ಜೋಡಿ ‘ಮಫ್ತಿ’ ಸಿನಿಮಾದಲ್ಲಿ ಬಾಬು ಹಿರಣ್ಣಯ್ಯ ಅವರನ್ನು ಕಂಡ ಮೇಲೆ ಅವರಿಗೆ ಸಿನಿಮಾಗಳಿಂದ ಅವಕಾಶಗಳು ಹೆಚ್ಚಿವೆ. ಆದರೆ ‘ಮಫ್ತಿ’ ಚಿತ್ರಕ್ಕೂ ಎಷ್ಟೋ ಮೊದಲೇ ನನಗೆ ಪಾತ್ರ ನೀಡುವುದಾಗಿ ಬಂದು ಅವಕಾಶ ಕೊಟ್ಟವರು ವಿಕಾಸ್ ಎಂದರು ಬಾಬು ಹಿರಣ್ಣಯ್ಯ. ಚಿತ್ರದಲ್ಲಿ ಸೀತಾಕೋಟೆ ಅವರು ಬಾಬು ಹಿರಣ್ಣಯ್ಯ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಈಗ ತಾಯಿಯಾಗಿ ನಟಿಸುತ್ತಿರುವ ಯಾವ ಕಲಾವಿದೆ ಕೂಡ ಬೇಡ ಎಂಬ ನಿರ್ಧಾರ ಇದ್ದ ಕಾರಣ, ನನ್ನನ್ನು ಆಯ್ಕೆ ಮಾಡಿದ್ದಾರೆ. ವಿಕಾಸ್ಚ ತುಂಬಾ ಮೃದು ಸ್ವಭಾವದ ನಿರ್ದೇಶಕ ಎನ್ನುವುದು ಸೀತಾ ಅವರ ಅಭಿಪ್ರಾಯವಾಗಿತ್ತು. ಪೋಷಕ ನಟ ಅರಸು ಮಾತನಾಡಿ ತಮ್ಮ ಪಾತ್ರ ದೊಡ್ಡದೇನು ಅಲ್ಲವಾದರೂ ಕತೆ ಇಷ್ಟವಾದ ಕಾರಣ ಸಂತೋಷದಿಂದಲೇ ಸಿಕ್ಕ ಪಾತ್ರಕ್ಕೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿದರು.
ಮುಂದಿನ ನಿಲ್ದಾಣ ಚಿತ್ರವನ್ನು ಸೋಮ್ ಸಿಂಗ್ ಮತ್ತು ಚಂದ್ರಶೇಖರ ನಾಯ್ಡು ಅವರು ಸೇರಿ ನಿರ್ಮಿಸುತ್ತಿದ್ದಾರೆ. ಅಪರೂಪಕ್ಕೆ ಎನ್ನುವಂತೆ ಆಕರ್ಷಕವಾಗಿ ಮಾತನಾಡುವ ನಿರ್ಮಾಪಕರನ್ನು ಕಾಣುತ್ತೇವೆ. ಅಂಥವರ ಸಾಲಿನಲ್ಲಿ ತಮ್ಮನ್ನೂ ಸೇರಿಸಬಹುದು ಎನ್ನುವುದನ್ನು ನಿರ್ಮಾಪಕ ಸೋಮ್ ಸಿಂಗ್ ತಮ್ಮ ಮಾತುಗಳಿಂದ ಸಾಬೀತು ಮಾಡಿದರು. ಪ್ರೇಮಚಿತ್ರವೆಂದು ಆರಂಭಗೊಂಡ ಸಿನಿಮಾ ಇಂದು ಸಾಹಸದ ಸಿನಿಮಾವಾಗಿ ಬದಲಾಗಿದೆ. ನಿರ್ದೇಶಕರ ಟ್ಯಾಲೆಂಟ್ ನೋಡಿಯೇ ಈ ಚಿತ್ರ ನಿರ್ಮಿಸಲು ಒಪ್ಪಿಕೊಂಡೆ. ಜೊತೆಗೆ ನಾನು ಕೂಡ ಸಣ್ಣದೊಂದು ಪಾತ್ರವನ್ನು ಕೂಡ ಮಾಡಿದ್ದಾಗಿ ಸೋಮ್ ಸಿಂಗ್ ಹೇಳಿದರು.
ನಿರ್ದೇಶಕ ರಾಜ್ ಥ್ಯಾಂಕ್ಸ್ ಬಿಟ್ಟು ಬೇರೇನೂ ಹೇಳಿಲ್ಲ. ಕೊನೆಯದಾಗಿ ಮಾತನಾಡಿದ ವಿಕಾಸ್, “ನಾನು ರಾಜ್ ನಿರ್ದೇಶನದ ಚಿತ್ರಕ್ಕೆ ಚಿತ್ರಕತೆ ಮಾಡಲು ಬಂದವನು. ಕೊನೆಗೆ ಅವರದೇ ಒತ್ತಾಯದ ಮೇರೆಗೆ ನಾಯಕನಾದೆ. ಇದರಲ್ಲಿ ದ್ವೇಷ, ತಮಾಷೆ, ಪ್ರೀತಿ ಎಲ್ಲವೂ ಒಳಗೊಂಡಿದೆ” ಎಂದರು.
ಅಗಲಿದವರ ನೆನಪು
ಚಿತ್ರದಲ್ಲಿ ನಟಿಸಿದ ಎರಡು ಮಂದಿ ಕಲಾವಿದರು ಇಂದು ನಮ್ಮೊಂದಿಗೆ ಇಲ್ಲ. ಅವರಲ್ಲಿ ಒಬ್ಬರು ಖಳನಟ ರಾಘವ ಉದಯ್. ಅರ್ಧ ಸಿನಿಮಾ ಚಿತ್ರೀಕರಣ ಆಗುವ ಹೊತ್ತಿಗೆ ಮೃತರಾದ ಅವರನ್ನು ನೆನಪಿಸುವ ದೃಷ್ಟಿಯಿಂದ ಅವರದೇ ದೃಶ್ಯಗಳನ್ನು ಬಳಸಲಾಗಿದೆ. ಮಧ್ಯಂತರದ ಬಳಿಕದ ಪಾತ್ರವನ್ನು ಭಜರಂಗಿ ಲೋಕಿ ಅವರ ಮೂಲಕ ಮಾಡಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ವಠಾರ ಮಲ್ಲೇಶ್ ಕೂಡ ಚಿತ್ರದಲ್ಲೊಂದು ಪಾತ್ರ ಮಾಡಿದ್ದು ಅವರು ಕೂಡ ಇಂದು ನಮ್ಮೊಡನೆ ಇರದಿರುವುದು ದುರಂತ.
Be the first to comment