ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಾಖಾಹಾರಿ’ ಸಿನಿಮಾ ಫೆ.16ರಂದು ತೆರೆ ಕಾಣಲಿದೆ.
ಸಂದೀಪ್ ಸುಂಕದ್ ನಿರ್ದೇಶಿಸಿರುವ ‘ಶಾಖಾಹಾರಿ’ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಿರ್ದೇಶಕ ಸೂರಿ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಂದೀಪ್ ಅವರ ನಿರ್ದೇಶನದ ಈ ಚೊಚ್ಚಲ ಸಿನಿಮಾದಲ್ಲಿ ಮಲೆನಾಡಿನ ಸೊಗಡಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಕಥೆ ಇರುವ ಈ ಸಿನಿಮಾವನ್ನು ನಿಗೂಢ ಘಟನೆಗಳ ಸುತ್ತ ಹೆಣೆಯಲಾಗಿದೆ.
ಅಡುಗೆ ಭಟ್ಟನಾಗಿ ರಂಗಾಯಣ ರಘು, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ತಾರಾಬಳಗದಲ್ಲಿದ್ದಾರೆ.
‘ಇಲ್ಲಿಯವರೆಗೆ 350 ಸಿನಿಮಾ ಮಾಡಿದ್ದೇನೆ. ಚಿತ್ರರಂಗದ ಎಲ್ಲ ನಟರ ಜೊತೆ ಸಿನಿಮಾ ಮಾಡಿದ್ದೇನೆ. ಹೊಸಬರ ಜೊತೆಯೂ ಸಿನಿಮಾ ಮಾಡುತ್ತಿದ್ದೇನೆ. ಈ ರೀತಿ ಪಾತ್ರವನ್ನೇ ಮಾಡಬೇಕು ಎಂದು ನಾನು ಯೋಚಿಸಿಲ್ಲ. ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ. ಚಿತ್ರರಂಗಕ್ಕೆ ಹೊಸಬರು ಮತ್ತಷ್ಟು ಬರಲಿ ಎನ್ನುವ ಬಯಕೆ ನನ್ನದು’ ಎಂದರು ರಂಗಾಯಣ ರಘು.
ಕಾರ್ಯಕ್ರಮದಲ್ಲಿ ರಂಗಾಯಣ ರಘು ಅವರಿಗೆ ‘ಶಾಖಾಹಾರಿ’ ಚಿತ್ರತಂಡ ‘ಅಭಿನಯಾಸುರ’ ಬಿರುದು ನೀಡಿ ಗೌರವಿಸಿತು.
ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ‘ಶಾಖಾಹಾರಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಇದೆ.
——
Post Views:
73
Be the first to comment