ವಿನೋದ್ ಪ್ರಭಾಕರ್ 25ನೇ ಚಿತ್ರ ”ಬಲರಾಮನ ದಿನಗಳು”

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರಕ್ಕೆ ”ಬಲರಾಮನ ದಿನಗಳು” ಎಂದು ಹೆಸರಿಡಲಾಗಿದೆ.

ಶೀರ್ಷಿಕೆ ಅನಾವರಣ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು.  ಗೃಹ ಸಚಿವ ಡಾ. ಜಿ.ಪರಮೇಶ್ವರ್ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಪದ್ಮಾವತಿ ಫಿಲಂಸ್ ಎಂಬ ನೂತನ ನಿರ್ಮಾಣ ಸಂಸ್ಥೆ ಕೂಡ ಆರಂಭವಾಯಿತು.  ವಿನೋದ್ ಪ್ರಭಾಕರ್ ಅವರಿಗೆ “ಟೈಗರ್” ಬಿರುದು ನೀಡಿ ಸನ್ಮಾನಿಸಲಾಯಿತು.

“ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ “ಬಲರಾಮನ ದಿನಗಳು” ಚಿತ್ರ ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

“ಹಿಂದೆ ಸಿನಿಮಾದಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಈಗ ಕಮರ್ಷಿಯಲ್‍ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿದೆ. ಹಣ ಮಾಡಬೇಕು. ಆದರೆ ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ  ಹೋಗಬೇಕು. ಚಲನಚಿತ್ರ ಒಂದು ಪ್ರಬಲವಾದ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರ ಮನಸ್ಸು ಬದಲಾವಣೆ ಮಾಡುವ ಅವಕಾಶವಿರುತ್ತದೆ. ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ. ನನಗೆ ಟೈಗರ್ ಪ್ರಭಾಕರ್ ಪರಿಚಿತರು. ಅವರ ಮಗ ಇಂದು 25ನೇ ಸಿನಿಮಾ ಮಾಡುತ್ತಿದ್ದಾರೆ. ಇದು ತಮಾಷೆ ವಿಷಯವಲ್ಲ. ಅವರು ಇನ್ನೂ 25 ಸಿನಿಮಾಗಳನ್ನು ಮಾಡಲಿ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಿರ್ಮಾಪಕ ಶ್ರೇಯಸ್, ”ವಿನೋದ್‍ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರ ನಿರ್ಮಿಸುತ್ತಿದ್ದೇನೆ ”ಎಂದರು.

ನಾಯಕ ವಿನೋದ್ ಪ್ರಭಾಕರ್,  ”ನನಗೆ ಈ ಸಂಸ್ಥೆಯವರು “ಟೈಗರ್” ಎಂಬ ಬಿರುದು ಕೊಟ್ಟಿದ್ದಾರೆ.  ಬಿರುದಿಗೆ ಆ ಚಿತ್ರಗಳು ಧಕ್ಕೆ ತರದಂತೆ ನೋಡಿಕೊಳ್ಳುತ್ತೇನೆ. ಚೈತನ್ಯ ಅವರ ‘ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರೇನು ಬಲರಾಮನ ಪಾತ್ರ ಸೃಷ್ಠಿ ಮಾಡಿದ್ದಾರೋ, ಪ್ರಾಣ ಒತ್ತೆಯಿಟ್ಟು ಅದಕ್ಕೆ ನ್ಯಾಯ ಸಲ್ಲಿಸುತ್ತೇನೆ. ನನ್ನ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿದೆ” ಎಂದರು.

ನಿರ್ದೇಶಕ ಕೆ.ಎಂ.ಚೈತನ್ಯ, ”ಹೆಚ್ಚಿನ ಸಿನಿಮಾಗಳಲ್ಲಿ ಮನರಂಜನೆ ಇರುತ್ತದೆ. ಸಂದೇಶಗಳು ಕಡಿಮೆಯಾಗುತ್ತಿವೆ. ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್‍. ಈ ಕಥೆ ಆಯ್ಕೆ ಮಾಡಿದ್ದು ಅವರು. ಭೂಗತಲೋಕದ ಬಗ್ಗೆ ಸಾಕಷ್ಟು ಕಥೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕಥೆ ಮಾಡಬೇಕು ಅಂತ ಹೇಳಿದ್ದು ಶ್ರೇಯಸ್‍” ಎಂದು ತಿಳಿಸಿದರು.

”ಬಹಳ ವರ್ಷಗಳಿಂದ ವಿನೋದ್‍ ಪ್ರಭಾಕರ್ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ಕಥೆ ಸಿಕ್ಕಿದೆ. ಈ ಚಿತ್ರಕ್ಕೆ ಅವರು ಬಹಳ ಅತ್ಯುತ್ತಮ ಆಯ್ಕೆ. ಇದು ಭೂಗತಲೋಕದ ಸಿನಿಮಾ. ನಿಜ ಜೀವನದ ಕಥೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ. ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ಇದರಲ್ಲಿ ಮನರಂಜನೆ ಇರುತ್ತದೆ. ಇಡೀ ಕುಟುಂಬ ನೋಡುವ ಚಿತ್ರ ಎಂದು ತಿಳಿಸಿದರು.

ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!