ಕಾಲೇಜು ಓದುತ್ತಿರುವ ಯುವಕರ ಕಥೆ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೊಂದು ಪ್ರೇಮಕಥೆ ಅನಿಸುತ್ತದೆ. ಬಂಟಿ ಎಂಬಾತನ ಒಂಟಿತನದ ಕಥೆಯಲ್ಲ ಮತ್ತು ಕಾಲೇಜು ಓದುತ್ತಿರುವ ಪೋಲಿ ಯುವಕರ ಕಥೆಯೂ ಅಲ್ಲ ಯಾವುದು ಎಂದು ಹೇಳುವುದು ಸ್ವಲ್ಪ ಕಷ್ಟವೇ…
ಒಂಟಿ (ವೈಭವ್) ಮತ್ತು ಶ್ರೀಮಂತ್ ಅಲಿಯಾಸ್ ಬಂಟಿ (ಯತೀಶ್) ಇಬ್ಬರೂ ಪ್ರಾಣ ಸ್ನೇಹಿತರು. ಒಂಟಿಗೆ ಜೀವನದಲ್ಲಿ ಒಂಟಿಯಾಗಿರಲಿ ಇಷ್ಟವಿಲ್ಲ. ಆತ ಪ್ರೀತಿಸಲು ಹುಡುಗಿ ಹುಡುಕಲು ಕಾತರನಾಗಿರುತ್ತಾನೆ. ಆಗ ಅವನಿಗೆ ಸಿರಿ (ಶ್ರುತಿ) ಕಾಣುತ್ತಾಳೆ. ಅವಳ ಮೇಲೆ ಒಂಟಿಗೆ ಪ್ರೀತಿ ಚಿಗುರುತ್ತದೆ. ಅವನು ಆಕೆಯನ್ನು ಪಡೆಯಲು ಬಂಟಿಯ ಸಹಾಯ ಕೇಳುತ್ತಾನೆ. ಆದರೆ, ಬಂಟಿ ಈ ಪ್ರೀತಿ, ಆ ಹುಡುಗಿ ಎರಡೂ ಬೇಡ ಎಂದು ಹೇಳುತ್ತಲೇ ಒಂಟಿಗೆ ಸಹಾಯ ಮಾಡುತ್ತಾನೆ. ಆದರೂ ಒಂಟಿಗೆ ಆಕೆ ಸಿಗುವುದಿಲ್ಲ. ಯಾಕೆ ಸಿಗುವುದಿಲ್ಲ? ನಿಜಕ್ಕೂ ಆಗಿದ್ದೇನು ಎನ್ನುವುದು ಹೊಸ ಹಾದಿ ಹಿಡಿಯುವ ದ್ವಿತೀಯಾರ್ಧದ ಕಥೆ.
ಗೆಳೆತನ ಮತ್ತು ಪ್ರೇಮದ ಸುತ್ತ ಒಂದು ಭಾವನಾತ್ಮಕ ಕಥೆ ಹೇಳಲು ಯತೀಶ್ ಪ್ರಯತ್ನಿಸಿದ್ದಾರೆ. ಆದರೆ, ಪೂರ್ತಿಯಾಗಿ ಯಶಸ್ವಿಯಾಗಿಲ್ಲ. ಶುರುವಿನಿಂದ ಕೊನೆಯವರೆಗೆ ಒಂದು ಸಾಮಾನ್ಯ ಲಿಂಕ್ ಇಟ್ಟುಕೊಂಡಿದ್ದರೂ ಕಥೆ ಏನು ಹೇಳಲು ಹೋಗುತ್ತಿದೆ ಎಂಬ ಗೊಂದಲ ಕಾಡುತ್ತದೆ. ಅತಿಯಾದ ಸಂಭಾಷಣೆಗಳು ಪಾಡ್‌ಕಾಸ್ಟ್ ಕೇಳಿದಂತೆ ಮಾಡುತ್ತವೆ. ಕಥೆಯ ಕಟ್ಟುವಿಕೆಯಲ್ಲಿ ಇನ್ನಷ್ಟು ಪಳಗಬೇಕು. ಆದರೆ, ಮೊದಲ ಚಿತ್ರವಾದ ಕಾರಣ ನಿರ್ದೇಶಕ ಯತೀಶ್‌ಗೆ ವಿನಾಯಿತಿ ನೀಡಬಹುದು.
ಯತೀಶ್, ವೈಭವ್, ಶ್ರುತಿ ಅಭಿನಯ ಚೆನ್ನಾಗಿದೆ. ಇನ್ನಷ್ಟು ಪಳಗಿದರೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಶ್ವೇತಾ ಹಾಗೂ ಶ್ರೀಪರ್ಣಾಗೆ ಹೆಚ್ಚು ಕೆಲಸವೇನಿಲ್ಲ. ಮಲೆನಾಡು ಹಾಗೂ ಕರಾವಳಿ ವಾತಾವರಣವನ್ನು ಛಾಯಾಗ್ರಾಹಕರಾದ ಶಿವರಾಜ್ ಹಾಗೂ ಹೃತಿಕ್ ಸುಂದರವಾಗಿ ಸೆರೆಹಿಡಿದಿದ್ದಾರೆ. ಜತೆಗೆ ಅಭಿನವ್ ಸಂಕಲನ ಹಾಗೂ ಶ್ರೀಹರಿ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಮೊದಲ ಪ್ರಯತ್ನಕ್ಕೆ ಅಭಿನಂದನೆ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸುತ್ತ ಸಿನಿಮಾ ನೋಡಬಹುದು.
Be the first to comment