ಯುವನಟ ಆದಿಕೇಶವ ರೆಡ್ಡಿ ನಟನೆಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿದ ಆತ್ಮ ತಲ್ಲಣ ಚಿತ್ರವು ಇದೇ ಶುಕ್ರವಾರ ಡಿ.29ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಯಿತು. ಎಸ್.ಪಿ. ಕೃಷ್ಣ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆ ಶ್ರೀ ಯೋಗಮಾತಾ ಹುಲಿಯಮ್ಮದೇವಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಸಹ ಮಾಡಿದ್ದಾರೆ. ಆದಿಕೇಶವರೆಡ್ಡಿ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಲಾವಣ್ಯ ಅಭಿನಯಿಸಿದ್ದಾರೆ,
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಕೃಷ್ಣಪ್ಪ ನಾವು ಈ ಚಿತ್ರವನ್ನು ಶುರು ಮಾಡಿ ೩ ವರ್ಷಗಳಾಯಿತು, ಶೂಟಿಂಗ್ ಟೈಮಲ್ಲಿ ಹಲವಾರು ಅವಘಡಗಳು ನಡೆದವು, ತೊಂದರೆಗಳು ಎದುರಾದವು, 40 ದಿನಗಳ ಕಾಲ ಮೈಸೂರು, ಗೋಪಾಲಪುರದ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಮಾಡಿದ್ದೇವೆ, ಒಂದಷ್ಟು ರಿಯಲ್ ಇನ್ಸಿಡೆಂಟ್ ಇಟ್ಟುಕೊಂಡು ಸಿನಿಮ್ಯಾಟಿಕ್ ಆಗಿ ಚಿತ್ರವನ್ನು ಮಾಡಿದ್ದೇವೆ.
ಅತ್ಯಾಚಾರಕ್ಕೊಳಗಾದ ಹೆಣ್ಣಿನ ರಿವೆಂಜ್ ಕಥೆಯೇ ಆತ್ಮತಲ್ಲಣ. ಸಿನಿಮಾ ಬಿಡುಗಡೆಯ ಹಂತಕ್ಕೆ ಬರಲು ನಾಯಕನ ಸಹಕಾರ ದೊಡ್ಡದು ಎಂದರು,
ನಂತರ ನಾಯಕ ಆದಿಕೇಶವರೆಡ್ಡಿ ಮಾತನಾಡುತ್ತ ನಾನು ಓದಿದ್ದು ಮುಳುಬಾಗಿಲಲ್ಲೇ. ಚಿಕ್ಕವನಿದ್ದಾಗಿನಿಂದ ಸಿನಿಮಾದಲ್ಲಿ ಆಕ್ಟಿಂಗ್ ಮಾಡಬೇಕೆಂಬ ಆಸೆಯಿತ್ತು. ತಮಿಳಲ್ಲಿ ಜತಿನ್-೨ ಅಲ್ಲದೆ ಕನ್ನಡದ ವಿಚಾರಣೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಚಿತ್ರದಲ್ಲಿ ಬಡ ರೈತ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿದ್ದು, ದೇಶಸೇವೆ ಮಾಡಲೆಂದು ಮಿಲಿಟರಿ ಸೇರಿಕೊಳ್ಳುತ್ತೇನೆ. ನಿಧಿಯ ಆಸೆಗಾಗಿ ನನ್ನ ತಂದೆ ತಾಯಿ, ಹೆಂಡತಿಯನ್ನು ದುರುಳರು ಸಾಯಿಸಿ, ಆಕೆಯನ್ನು ಜೀವಂತವಾಗಿ ಹೂತಿರುತ್ತಾರೆ. ಮುಂದೆ ಏನಾಗುತ್ತದೆ ಅನ್ನುವುದೇ ಆತ್ಮತಲ್ಲಣ ಕಥೆ. ಚಿತ್ರ ಕೊನೆಯವರೆಗೂ ಕುತೂಹಲ ಹುಟ್ಟುಹಾಕುತ್ತಲೇ ಸಾಗುತ್ತದೆ ಎಂದರು.
ಆದಿಕೇಶವರೆಡ್ಡಿ, ಲಾವಣ್ಯ, ಕೃಷ್ಣಪ್ಪ, ಮುನಿ, ರೋಹಿತ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಶ್ರೀನಿ ಕೊಪ್ಪ ಅವರ ಸಂಗೀತ ಸಂಯೋಜನೆ, ಸದಾಶಿವ ಅವರ ಛಾಯಾಗ್ರಹಣ, ರೋಲ್ಕಟ್ ಮೀಡಿಯಾ ಹೌಸ್ ಸಂಕಲನ, ಜಾಕಿ ಸೋಮು ಅವರ ಸಾಹಸ, ಜಗ್ಗು ಮಾಸ್ಟರ್ ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರವು U/A ಪ್ರಮಾಣ ಪಡೆದುಕೊಂಡಿದೆ.
Be the first to comment