ಉಗ್ರ ರೂಪದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಅನಾವರಣ

‘ಕಾಂತಾರ ಚಾಪ್ಟರ್ 1’ ಚಿತ್ರದ ಮುಹೂರ್ತ ನೆರವೇರುವ ಜೊತೆಗೆ ಫಸ್ಟ್ ಲುಕ್ ಅನಾವರಣ ಆಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ‘ಕಾಂತಾರ ಚಾಪ್ಟರ್ 1’  ಚಿತ್ರದ ಮುಹೂರ್ತ ನೆರವೇರಿದೆ. ಉಗ್ರ ರೂಪದಲ್ಲಿ ರಿಷಬ್ ಶೆಟ್ಟಿ ದರ್ಶನ ನೀಡಿದ್ದು, ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

‘ಕಾಂತಾರ ಚಾಪ್ಟರ್ 1‘ ಸಿನಿಮಾ ಕನ್ನಡ, , ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರುತ್ತಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.

‘ಕಾಂತಾರ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. ಸಣ್ಣ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು.  ‘ಕಾಂತಾರ’ ಮೊದಲು ಕನ್ನಡದಲ್ಲಿ ರಿಲೀಸ್ ಆಯಿತು. ಆ ಬಳಿಕ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿತು.

‘ಕಾಂತಾರ’ ಭಾರತದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಯಶಸ್ಸಿನಿಂದ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ಷೆಲ್ ಮಾಡುವುದಕ್ಕೆ ಮುಂದಾಗಿದ್ದಾರೆ. ‘ಕಾಂತಾರ 2’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ನಿರ್ಧರಿಸಿದೆ. ರಿಷಬ್ ಶೆಟ್ಟಿ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

‘ಕಾಂತಾರ 2’ ಚಿತ್ರ ಬರಲಿದೆ ಎಂದಾಗಿನಿಂದ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಕುತೂಹಲ ಇತ್ತು. ಬಿಡುಗಡೆ ಆಗಿರುವ ಪೋಸ್ಟರ್ ಭರ್ಜರಿಯಾಗಿದ್ದು, ಸಿನಿಮಾಸಕ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ಹೊಂಬಾಳೆ ಫಿಲಂಸ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ ಚಿತ್ರದ ಫಸ್ಟ್ ಲುಕ್  ನ ಹಿನ್ನೆಲೆ ಸಂಗೀತ, ದೈವದ ಉಗ್ರ ರೂಪ ಗಮನ ಸೆಳೆದಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!