‘ಕೋಣ’ ಪೋಸ್ಟರ್ ರಿಲೀಸ್​

ಕೋಮಲ್​ ಕುಮಾರ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಕೋಣ’ದ ಪೋಸ್ಟರ್  ರಿಲೀಸ್​ ಆಗಿದೆ.

ಇದೊಂದು ನೈಜ ಘಟನೆ ಆಧಾರಿತ ಚಿತ್ರ ಆಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಅಭಿನಯಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಆನೆ, ಶ್ವಾನ, ಕೋತಿ ಸೇರಿ ಮೊದಲಾದ ಪ್ರಾಣಿಗಳನ್ನು ಬಳಸಿಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಈ ಚಿತ್ರದಲ್ಲಿ “ಕೋಣ”ವನ್ನು ಮುಖ್ಯ ಪಾತ್ರವಾಗಿ ಬಳಸಿಕೊಳ್ಳಲಾಗುತ್ತಿದ್ದು, ಪೋಸ್ಟರ್ ಗಮನ ಸೆಳೆಯುತ್ತಿದೆ.

2024ರ ಜನವರಿಯಲ್ಲಿ ‘ಕೋಣ’ದ  ಚಿತ್ರೀಕರಣ ಆರಂಭವಾಗಲಿದೆ. ತೇಜ್ವಿನ್ ಪ್ರೊಡಕ್ಷನ್ ಲಾಂಛನದಲ್ಲಿ ವಿನೋದ್ ಕುಮಾರ್ ಹಾಗೂ ಸೆಲ್ವನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಕುಮಾರ್ ಬಿ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಂಜಯ್ ಹಾಗೂ ಉತ್ತಮ್ ಸ್ವರೂಪ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ನಿರ್ದೇಶಕ ಹರಿಕೃಷ್ಣ ಅವರು ತಿಳಿಸಿದ್ದಾರೆ.

ವಿಭಿನ್ನ ಮ್ಯಾನರಿಸಂನಿಂದಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ ಕೋಮಲ್ ಕುಮಾರ್ ಕೆಲ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು.  ‘ಕಾಲಾಯ ನಮಃ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕೋಮಲ್​ ಕುಮಾರ್ ಕಮ್‌ ಬ್ಯಾಕ್ ಮಾಡಿದ್ದಾರೆ. ‘ರೋಲೆಕ್ಸ್’ ಹಾಗೂ ‘ಎಲಾಕುನ್ನಿ’ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಕೋಮಲ್ , ಈಗ ಬಹು‌ಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ‘ಕೋಣ’ಗೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ.

”ಯಲಾಕುನ್ನಿ”  ಕೋಮಲ್​ ಕುಮಾರ್​ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಆಗಿದೆ. ಸಿನಿಮಾದ ಫಸ್ಟ್ ಲುಕ್​ನಲ್ಲಿ ಕೋಮಲ್​ ಅವರು ನಟ ವಜ್ರಮುನಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. “ಮೇರಾ ನಾಮ್ ವಜ್ರಮುನಿ” ಎಂಬ ಅಡಿಬರಹ ಕೂಡ ಇದೆ. ಕೋಮಲ್​ ಸಹೋದರ ಜಗ್ಗೇಶ್ ಪುತ್ರ ಯತಿರಾಜ್ ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್  ‘ಯಲಾಕುನ್ನಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!