ಪ್ರಕಾಶ್ ರಾಜ್​ಗೆ ಇಡಿ ಸಮನ್ಸ್

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ.

ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್ ಜ್ಯುವೆಲ್ಲರ್ಸ್  ವಿರುದ್ಧ 100 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಕಾಶ್ ರಾಜ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಣವ್ ಜ್ಯುವೆಲ್ಲರ್ಸ್ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.  ಇಡಿ ಅಧಿಕಾರಿಗಳು ನವೆಂಬರ್ 20ರಂದು ದಾಳಿ ನಡೆಸಿ 23.70 ಲಕ್ಷ ರೂಪಾಯಿಗಳ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು. ಪ್ರಕಾಶ್​ ರಾಜ್ ಈ ಜ್ಯುವೆಲ್ಲರ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಮೂಲಗಳ ಪ್ರಕಾರ ಇಡಿ,  ಪ್ರಕಾಶ್​ ರಾಜ್ ಅವರ ಹೇಳಿಕೆಯನ್ನು ದಾಖಲಿಸಲು ಬಯಸಿದ್ದು ಕೆಲವು ಉದ್ದೇಶಿತ ಪಾವತಿಗಳು ಮತ್ತು ಇತರ ಹಣಕಾಸಿನ ವಹಿವಾಟುಗಳ ಬಗ್ಗೆ ತಿಳಿದುಕೊಳ್ಳಲು  ಮುಂದಾಗಿದೆ.

ಪೊಲೀಸ್ ದೂರಿನ ಪ್ರಕಾರ, ಪ್ರಣವ್ ಜ್ಯುವೆಲ್ಲರ್ಸ್​ ಚಿನ್ನದ ಹೂಡಿಕೆ ಯೋಜನೆಯ ಹೆಸರಲ್ಲಿ ಅಧಿಕ ಲಾಭದ ಭರವಸೆ ಮೇಲೆ ಸಾರ್ವಜನಿಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಆದರೆ ಹೂಡಿಕೆದಾರರಿಗೆ ಅವರ ಹಣವನ್ನು ಹಿಂದಿರುಗಿಸಲು ಪ್ರಣವ್ ಜ್ಯುವೆಲ್ಲರ್ಸ್ ವಿಫಲವಾಗಿದೆ. ಜ್ಯುವೆಲರ್ಸ್ ಸಂಸ್ಥೆ ಮತ್ತು ಇತರ ಸಂಪರ್ಕಿತ ವ್ಯಕ್ತಿಗಳು ಸಾರ್ವಜನಿಕ ಹಣವನ್ನು ಶೆಲ್ ಕಂಪನಿಗಳಿಗೆ ತಿರುಗಿಸುವ ಮೂಲಕ ವಂಚಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಪಾವತಿಗಳ ಬದಲಿಗೆ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಹೊಂದಾಣಿಕೆ ಮತ್ತು ನಕಲಿ ಎಂಟ್ರಿಗಳ ನೀಡಿರುವುದಾಗಿ ತಪ್ಪೊಪ್ಪಿಕೊಳ್ಳಲಾಗಿದೆ. ಈ ಹಿಂದೆ ದಾಳಿ ವೇಳೆ 23.70 ಲಕ್ಷ ರೂ. ನಗದು, 11.60 ಕೆಜಿ ತೂಕದ ಚಿನ್ನದ ಗಟ್ಟಿಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

ಜ್ಯುವೆಲ್ಲರ್ಸ್ ಕಂಪನಿ ವಿರುದ್ಧ ತಮಿಳುನಾಡು ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಖಲಿಸಿದ ಎಫ್‌ಐಆರ್‌ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!