ಈ ವಾರ ಕನ್ನಡದಲ್ಲಿ 5 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಒಂದೇ ದಿನ ಐದು ಚಿತ್ರಗಳು ಬಿಡುಗಡೆಯಾಗುವ ಮೂಲಕ ತಾರೆಗಳ ನಡುವೆ ಭರ್ಜರಿ ಪೈಪೋಟಿ ಉಂಟಾಗಿದೆ.
ಈ ಶುಕ್ರವಾರ ಅಭಿಷೇಕ್ ಅಂಬರೀಶ್ – ರಚಿತಾ ರಾಮ್ ನಟನೆಯ ‘ಬ್ಯಾಡ್ ಮ್ಯಾನರ್ಸ್’, ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’, ರಾಜ್ ಬಿ. ಶೆಟ್ಟಿ ಸಾರಥ್ಯದ ‘ಸ್ವಾತಿಮುತ್ತಿನ ಮಳೆ ಹನಿಯೇ’ ‘ಎಲೆಕ್ಟ್ರಾನಿಕ್ ಸಿಟಿ’, ‘ಸ್ಕೂಲ್ ಡೇಸ್’ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.
ಬ್ಯಾಡ್ ಮ್ಯಾನರ್ಸ್
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ʻಬ್ಯಾಡ್ ಮ್ಯಾನರ್ಸ್ʼ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.ದುನಿಯಾ ಸೂರಿ- ಅಭಿಷೇಕ್ ಕಾಂಬಿನೇಶನ್ ನ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ.
ಪೊಲೀಸ್ ಆಫೀಸರ್ ರುದ್ರ ಪಾತ್ರದಲ್ಲಿ ಅಭಿಷೇಕ್ ನಟಿಸಿದ್ದಾರೆ. ಜಯಣ್ಣ ಕಂಬೈನ್ಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದೆ. ‘ಪಾಪ್‌ಕಾರ್ನ್ ಮಂಕಿಟೈಗರ್’ ಬಳಿಕ ಸೂರಿ ಈ ಚಿತ್ರಕ್ಕೆ ಕೈಗೆತ್ತಿಕೊಂಡಿದ್ದಾರೆ.
ಶುಗರ್ ಫ್ಯಾಕ್ಟರಿ
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ, ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ನವೆಂಬರ್ 24ರಂದು ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು, ಟ್ರೈಲರ್ ಎಲ್ಲರ ಮನ ಗೆದ್ದಿದೆ. ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಎಲ್ಲ ಚಿತ್ರಗಳಿಗಿಂತ “ಶುಗರ್ ಫ್ಯಾಕ್ಟರಿ” ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಎನ್ನಲಾಗುತ್ತಿದೆ.
ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ನಟಿಸಿದ್ದಾರೆ. ರಂಗಾಯಣ ರಘು ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಸ್ವಾತಿಮುತ್ತಿನ ಮಳೆ ಹನಿಯೇ’
ಒಂದು ಮೊಟ್ಟೆಯ ಕಥೆʼ, ʻಗರುಡ ಗಮನ ವೃಷಭ ವಾಹನʼ ಚಿತ್ರಗಳ ನಂತರ ರಾಜ್ ಬಿ. ಶೆಟ್ಟಿ ‘ಸ್ವಾತಿಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ನಟನೆಯಿಂದ ಹಿಂದೆ ಸರಿದು ಕೇವಲ ನಿರ್ಮಾಪಕಿಯಾಗಿ ಮುಂದುವರಿದರು. ಅವರ ಜಾಗಕ್ಕೆ ಸಿರಿ ರವಿಕುಮಾರ್ ಎಂಟ್ರಿಯಾದರು.
ಎಲೆಕ್ಟ್ರಾನಿಕ್ ಸಿಟಿ
ಐಟಿ ಉದ್ಯೋಗಿಗಳ ಕಥೆ ಇಟ್ಟುಕೊಂಡು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ಆರ್. ಚಿಕ್ಕಣ್ಣ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಆರ್ಯನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ, ರಶ್ಮಿ ಮುಂತಾದವರು ನಟಿಸಿದ್ದಾರೆ. ಸೌಂದರ್ ರಾಜ್ ಸಂಕಲನ, ಹಂಪಿ ಸುಂದರ್ ಕಲಾ ನಿರ್ದೇಶನ ಮಾಡಿದ್ದಾರೆ.
ಸ್ಕೂಲ್ ಡೇಸ್
ಉತ್ತರ ಕರ್ನಾಟಕದ ಪ್ರತಿಭೆಗಳು ತಮ್ಮ ಭಾಷೆಯ ಸೊಗಡಿನಲ್ಲಿ ನಿರ್ಮಿಸಿರುವ ಸ್ಕೂಲ್ ಡೇಸ್ ಚಿತ್ರ ಬೆಳ್ಳಿ ಪರದೆಯ ಮೇಲೆ ನವೆಂಬರ್ 24ರಂದು ರಾಜ್ಯಾದ್ಯಂತ ರಾರಾಜಿಸಲಿದ್ದಾರೆ. ಉಮೇಶ್. ಎಸ್. ಹಿರೇಮಠ ನಿರ್ಮಾಣದಲ್ಲಿ ಸಂಜಯ್ ಹೆಚ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
——
Be the first to comment