ಚಿತ್ರ: ರಾಜಯೋಗ
ನಿರ್ದೇಶನ: ಲಿಂಗರಾಜ ಉಚ್ಚಂಗಿದುರ್ಗ
ನಿರ್ಮಾಣ: ಶ್ರೀರಾಮ ರತ್ನ ಪ್ರೊಡಕ್ಷನ್ಸ್
ತಾರಾಗಣ: ಧರ್ಮಣ್ಣ ಕಡೂರು, ನಿರೀಕ್ಷಾ ರಾವ್, ನಾಗೇಂದ್ರ ಶಾ ಇತರರು
ರೇಟಿಂಗ್: 3.5/5
ಹಾಸ್ಯದ ಜೊತೆಗೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಅಚ್ಚುಕಟ್ಟಾದ ಸಿನಿಮಾ ಆಗಿ ರಾಜಯೋಗ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.
ಮೂಲ ನಕ್ಷತ್ರದಲ್ಲಿ ಹುಟ್ಟಿದ ನಾಯಕ ಪ್ರಾಣೇಶ್ ಊರಿನಲ್ಲಿ ಎಲ್ಲರಿಂದ ಅವಮಾನಕ್ಕೆ ಒಳಗಾಗುತ್ತಾನೆ. ಚೆನ್ನಾಗಿ ಓದಿ ಆ ಮೂಲಕ ಅವಮಾನವನ್ನು ಅರಗಿಸಿಕೊಳ್ಳುವ ನಾಯಕ ಕೆಎಎಸ್ ಪರೀಕ್ಷೆ ಬರೆದು ಅದೇ ಊರಿಗೆ ತಹಶೀಲ್ದಾರನಾಗಿ ಬರುವ ಕನಸನ್ನು ಕಾಣುತ್ತಾನೆ. ಆತನ ಕನಸು ಈಡೇರುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಹಳ್ಳಿಯಲ್ಲಿ ನಡೆಯುವ ಈ ಕಥೆಗೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಗುವನ್ನು ಪ್ರಧಾನವಾಗಿರಿಸಿಕೊಂಡಿರುವ ಚಿತ್ರದಲ್ಲಿ ಹಾಸ್ಯಕ್ಕೆ ಪೂರಕವಾಗಿ ಸಂಭಾಷಣೆಯನ್ನು ಬಳಸಲಾಗಿದೆ. ಯಾವುದೇ ರೀತಿಯ ದ್ವಂದ್ವಾರ್ಥದ ಹಾಸ್ಯ ಬಳಸದೆ ಹಳ್ಳಿಗಾಡಿನ ಸಹಜ ಭಾಷೆಯನ್ನು ಬಳಸಲಾಗಿದೆ.
ಪ್ರಾಣೇಶ್ ಪಾತ್ರದಲ್ಲಿ ಧರ್ಮಣ್ಣ ಕಡೂರು ಸಿನಿಮಾಕ್ಕೆ ಜೀವ ತುಂಬುವ ಯತ್ನ ಮಾಡಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ನಟಿಸಿರುವ ನಾಗೇಂದ್ರ ಶಾ ಅವರು ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿ ನಿರೀಕ್ಷಾ ರಾವ್ ಅಭಿನಯ ಸಹಜವಾಗಿ ಮೂಡಿ ಬಂದಿದೆ.
ಸಂಕಲನವನ್ನು ಒಂದಷ್ಟು ಚುರುಕಾಗಿ ಮಾಡುವ ಜೊತೆಗೆ ಅನಗತ್ಯ ಹಾಡುಗಳಿಗೆ ಕತ್ತರಿ ಹಾಕಿದ್ದರೆ ಚಿತ್ರದ ಅವಧಿ ಕಡಿಮೆಯಾಗಿ ಪ್ರೇಕ್ಷಕರಿಗೆ ಇನ್ನಷ್ಟು ಹಿತವಾಗುವ ಸಾಧ್ಯತೆ ಇತ್ತು. ನಿರ್ದೇಶಕರು ಈ ವಿಚಾರದಲ್ಲಿ ಎಡವಿದ್ದಾರೆ. ಆದರೂ ಇತಿಮಿತಿಗಳ ನಡುವೆ ನಗುವನ್ನು ಪ್ರಧಾನವಾಗಿರಿಸಿಕೊಂಡಿರುವ ಈ ಚಿತ್ರ ಸಾಲು ಸಾಲಾಗಿ ತೆರೆಗೆ ಅಪ್ಪಳಿಸುತ್ತಿರುವ ಚಿತ್ರಗಳ ನಡುವೆ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ ಎಂದರೆ ತಪ್ಪಲ್ಲ.
___
Be the first to comment