ನಟ ಲೂಸ್ ಮಾದ ಯೋಗಿ ಬೆಂಗಳೂರಿನಲ್ಲಿ ತಮಿಳು ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯೋಗಿ ಭಾಗವಹಿಸಿ ತಮಿಳಿನಲ್ಲೇ ತಮ್ಮ ‘ರೋಸಿ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸ್ಥಳೀಯರು ಕನ್ನಡದಲ್ಲೇ ಮಾತನಾಡಲು ಹೇಳಿದರೂ ಯೋಗಿ ಕೇಳಲಿಲ್ಲ ಎನ್ನಲಾಗಿದೆ.
“ಮುಂದಿನ ವರ್ಷ ‘ರೋಸಿ’ ಸಿನಿಮಾ ಬಿಡುಗಡೆಯಾಗುತ್ತದೆ. ಎಂಜಾಯ್ ಮಾಡಿ. ಸಖತ್ತಾಗಿರುತ್ತದೆ. ಎಲ್ಲರಿಗೂ ಒಳ್ಳೆಯ ಟ್ರೀಟ್. ವಿಷ್ಯುವಲ್ ಟ್ರೀಟ್. ಸ್ಯಾಂಡಿ ಮಾಸ್ಟರ್ ಡ್ಯಾನ್ಸ್ ಸೂಪರ್. ನಾನು ಅವರ ದೊಡ್ಡ ಅಭಿಮಾನಿ. ಡ್ಯಾನ್ಸ್ ಮಾಡಲಿಲ್ಲ ಅಂದ್ರೆ ಬಿಡಲ್ವಾ? ಡ್ಯಾನ್ಸ್ ಬಳಿಕ ಆಡೋಣ ಡ್ಯಾನ್ಸ್ ಮಾಸ್ಟರ್” ಎಂದು ತಮಿಳಿನಲ್ಲಿ ಯೋಗಿ ಹೇಳಿದ್ದಾರೆ. ಬಳಿಕ ಕನ್ನಡದಲ್ಲಿ ಮಾತು ಮುಂದುವರೆಸಿದ್ದಾರೆ.
ಕನ್ನಡದ ನಟನೊಬ್ಬ ತಮಿಳಿನಲ್ಲಿ ಮಾತನಾಡಿ ಯಾವ ರೀತಿಯ ಸಂದೇಶ ರವಾನಿಸಿದ್ದಾರೆ? ಬೆಂಗಳೂರಿನಲ್ಲಿ ಇರುವವರಿಗೆ ಕನ್ನಡ ಬರುವುದಿಲ್ಲವಾ? ಯೋಗಿ ಕನ್ನಡದಲ್ಲೇ ಮಾತನಾಡಬೇಕಿತ್ತು. ಅದು ಬಿಟ್ಟು ತಮಿಳು ಭಾಷಿಕರು ಆ ಭಾಗದಲ್ಲಿ ಜಾಸ್ತಿ ಇದ್ದಾರೆ ಎನ್ನುವ ತಮಿಳಿನಲ್ಲಿ ಮಾತನಾಡಿ ಓಲೈಸುವ ಅಗತ್ಯ ಏನಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಯೋಗಿ ಅವರ 50ನೇ ಸಿನಿಮಾ ‘ರೋಸಿ’ ಬಹಳ ಕುತೂಹಲ ಮೂಡಿಸಿದೆ. ‘ಹೆಡ್ಬುಷ್’ ಸಿನಿಮಾ ಮಾಡಿದ್ದ ಶೂನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ರೋಸಿ’ ಸಿನಿಮಾ ಚಿತ್ರೀಕರಣ ಸಾಗುತ್ತಿದ್ದು, ರೋಸಿ ಭಾಯ್ ಆಗಿ ಚಿತ್ರದಲ್ಲಿ ಯೋಗಿ ಅಬ್ಬರಿಸಲಿದ್ದಾರೆ. ಬಳೆ ರೀತಿಯ ಮೂಗತಿ ಧರಿಸಿ, ಸಿಗರೇಟ್ ಸೇದುತ್ತಾ ಯೋಗಿ ಕಾಣಿಸಿಕೊಂಡಿದ್ದ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ.
ಸೂರಿ ನಿರ್ದೇಶನದ ‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಆಗಿ ಯೋಗಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಹೀರೊ ಆಗಿದ್ದರು. ‘ಒಂಭತ್ತನೇ ದಿಕ್ಕು’, ‘ಹೆಡ್ ಬುಷ್’ ಚಿತ್ರಗಳಲ್ಲಿ ಯೋಗಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ‘ಲಂಕಾಸುರ’, ‘ಆಡಿದ್ದೇ ಆಟ’, ‘ಕಂಸ’, ‘ಬ್ಯಾಚುಲರ್ ಪಾರ್ಟಿ’, ‘ನಾನು ಅದು ಮತ್ತು ಸರೋಜ’, ‘ಹೆಡ್ಬುಷ್- 2’, ‘ಸಿದ್ಲಿಂಗು- 2’ ಸಿನಿಮಾಗಳು ಯೋಗಿ ಕೈಯಲ್ಲಿವೆ.
Be the first to comment