ನಿರ್ದೇಶನ: ಯೋಗರಾಜ್ ಭಟ್
ನಿರ್ಮಾಣ: ವನಜಾ ಪಾಟೀಲ್
ತಾರಾ: ಯಶಸ್ ಸೂರ್ಯ, ಬಿ ಸಿ ಪಾಟೀಲ್, ದರ್ಶನ್, ರವಿಶಂಕರ್, ಸೋನಾಲ್ ಮೊಂತೆರೋ, ಧರ್ಮಣ್ಣ ಕಡೂರ್ ಇತರರು
ರೇಟಿಂಗ್: 4/5
ಪ್ರೀತಿ ಪ್ರೇಮದ ಕಥೆಯ ಮೂಲಕ ಪ್ರೇಕ್ಷಕರಿಗೆ ರೋಚಕತೆಯನ್ನು ಉಣಬಡಿಸುತ್ತಿದ್ದ ಯೋಗರಾಜ್ ಭಟ್ ಅವರು ಆಕ್ಷನ್ ಕಥೆಯ ಮೂಲಕ ತೆರೆಯ ಮುಂದೆ ಬರುವ ಯತ್ನ ಮಾಡಿದ್ದಾರೆ. ಆದರೆ ಕುಸ್ತಿಯ ಕಥೆ ಇರುವ ಗರಡಿ ಚಿತ್ರ ಸಿದ್ದಸೂತ್ರ ಹೊಂದಿದ ಸಿನಿಮಾವಾಗಿ ರೂಪುಗೊಂಡಿದೆ.
ರವಿಶಂಕರ್ ಮುಖ್ಯಸ್ಥ ಆಗಿರುವ ರಾಣೆ ಕುಟುಂಬ ಗರಡಿ ಮನೆಯನ್ನು ನಡೆಸಿಕೊಂಡು ಬರುತ್ತಿರುತ್ತದೆ. ಇಲ್ಲಿಯ ಮುಖ್ಯಸ್ಥ ಯಾರು ಸೋಲಿಸಲು ಸಾಧ್ಯವಿಲ್ಲದ ಪೈಲ್ವಾನ್ ಕೋರಾಪಿಟ್ ರಂಗಪ್ಪ. ರಂಗಪ್ಪನ ಸ್ನೇಹಿತನ ಹತ್ಯೆಯಾದ ಬಳಿಕ ಅವನ ಮಕ್ಕಳಾದ ದರ್ಶನ್ (ಶಂಕರ)ಹಾಗೂ ಸೂರ್ಯ (ಸೂರಿ) ಅವರನ್ನು ರಂಗಪ್ಪ ಸಾಕಿ ಶಂಕರನನ್ನು ಕುಸ್ತಿಪಟು ಹಾಗೆ ಮಾಡುತ್ತಾನೆ. ಆದರೆ ಸೂರಿ ಅಖಾಡಕ್ಕೆ ಇಳಿಯಬಾರದು ಎನ್ನುವುದು ರಂಗಪ್ಪನ ನಿರ್ಬಂಧ. ಈ ನಡುವೆ ಶಂಕರ ಊರು ಬಿಟ್ಟರೆ, ಸೂರಿ ಕುಸ್ತಿ ಅಖಾಡಕ್ಕೆ ಇಳಿಯುತ್ತಾನೆ. ಮುಂದೆ ಕಥೆ ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ಸಾಗುತ್ತಾ ಹೋಗುತ್ತದೆ.
ಗಾಳಿಪಟ 2 ಚಿತ್ರದ ರೀತಿಯಂತೆ ದುರ್ಬಲವಾದ ಕಥೆ ಸೂತ್ರವಿಲ್ಲದ ಗಾಳಿಪಟದಂತೆ ತಿರುಗಲು ಶುರು ಮಾಡುತ್ತದೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ದರ್ಶನ್ ಅವರು ಕ್ಲೈಮಾಕ್ಸ್ ಗೆ ಜೀವ ತುಂಬಿದ್ದಾರೆ. ನಿರ್ದೇಶಕರು ಪ್ರೇಕ್ಷಕರಿಗೆ ಸಾಕು ಎನ್ನುವಷ್ಟರ ಮಟ್ಟಿಗೆ ಹೊಡೆದಾಟವನ್ನು ತೆರೆಯ ಮುಂದೆ ತಂದಿದ್ದಾರೆ.
ರಂಗಪ್ಪನ ಪಾತ್ರದಲ್ಲಿ ಬಿಸಿ ಪಾಟೀಲ್ ಅವರು ನೈಜ ನಟನೆ ತೋರಿದ್ದಾರೆ. ಯಶಸ್ ಸೂರ್ಯ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವಿಶಂಕರ್ ಭಿನ್ನವಾದ ಹಾವಭಾವದೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೋ ಅವರಿಗೆ ವಿರಾಮದ ನಂತರ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಸಿನಿಮಾದಲ್ಲಿ ಹಾಸ್ಯ, ಪ್ರೀತಿಗೆ ಅವಕಾಶ ಇಲ್ಲದ ಕಾರಣ ಧರ್ಮಣ್ಣ ಕಡೂರು ಅವರ ಹಾಸ್ಯಪಾತ್ರ ಹೆಸರಿಗಷ್ಟೇ ಇದೆ ಎಂದು ಅನಿಸುತ್ತದೆ.
ಚಿತ್ರದ ಶೀರ್ಷಿಕೆ ಹಾಡು ಓಕೆ ಅನಿಸುತ್ತದೆ. ಉಳಿದ ಹಾಡುಗಳನ್ನು ಬಲವಂತವಾಗಿ ತುರುಕಿದಂತೆ ಪ್ರೇಕ್ಷಕರಿಗೆ ಅನಿಸುತ್ತದೆ. ಹೊಡಿರೆಲೆ ಹಲಗಿ ಐಟಂ ಹಾಡು ವೀಕ್ಷಕರಿಗೆ ಕುಣಿಯುವಂತೆ ಮಾಡುತ್ತದೆ. ಛಾಯಾಗ್ರಹಕ ನಿರಂಜನ್ ಬಾಬು ಬಾದಾಮಿಯನ್ನು ಸುಂದರವಾಗಿ ಸೆರೆ ಹಿಡಿದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
____
Be the first to comment