ಮಾಮೂಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾಗಿ ಒಂದು ಸದಭಿರುಚಿಯ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವ ಚಿತ್ರ “ಭಾವಪೂರ್ಣ”.
ಸಿನಿಮಾದ ಕಥೆ ಪ್ರೇಕ್ಷಕರನ್ನು ಮಲೆನಾಡಿನ ಹಳ್ಳಿಯೊಂದಕ್ಕೆ 90ರ ದಶಕಕ್ಕೆ ಕರೆದುಕೊಂಡು ಹೋಗುತ್ತದೆ. ಜೀವನದಲ್ಲಿ ಏನೂ ಮಾಡದೇ ಇದ್ದರೂ ಪರವಾಗಿಲ್ಲ, ಒಂದು ಫೋಟೋ ಮಾತ್ರ ತೆಗೆಸಿಟ್ಟುಕೊಳ್ಳಬೇಕು ಎಂಬ ಮನಸ್ಥಿತಿಯ ಊರಿನಲ್ಲಿ ಸಿನಿಮಾ ಕಥೆ ನಡೆಯುತ್ತದೆ.
ಅಂತರ್ಮುಖೀಯಾಗಿರುವ 60ರ ವ್ಯಕ್ತಿಯೊಬ್ಬನಿಗೆ ತನಗೂ ಒಂದು ಫೋಟೋ ಬೇಕು ಎಂಬ ಆಸೆ ಚಿಗುರೊಡೆದಾಗ ಈ ಆಸೆ ಈಡೇರಿಸಿಕೊಳ್ಳಲು ಆತ ಹೊರಟಾಗ ಏನೇನು ತೊಂದರೆ ಎದುರಿಸಬೇಕಾಗುತ್ತದೆ ಎನ್ನುವುದು “ಭಾವಪೂರ್ಣ’ ಸಿನಿಮಾದ ಕಥೆ.
ಚಿತ್ರದಲ್ಲಿ ಎಮೋಶನ್, ಲವ್, ಕಾಮಿಡಿ, ಹಾಡು, ಡ್ಯಾನ್ಸ್ ಹೀಗೆ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಅಂಶಗಳನ್ನು ಸೇರಿಸಿ ನಿರ್ದೇಶಕ ಚೇತನ್ ಮುಂಡಾಡಿ ಭಾವನಾತ್ಮಕವಾಗಿ ಚಿತ್ರ ಕಟ್ಟಿ ಕೊಟ್ಟಿದ್ದಾರೆ.
ಇಳಿ ವಯಸ್ಸಿನ ವ್ಯಕ್ತಿಯ ಪಾತ್ರದಲ್ಲಿ ನಟಿಸಿರುವ ನಟ ರಮೇಶ್ ಪಂಡಿತ್ ಅಭಿನಯ ಚಿತ್ರದ ಜೀವಾಳವಾಗಿ ಮೂಡಿ ಬಂದಿದೆ. ಅಂತರ್ಮುಖಿಯಾಗಿ ಕಾಣಿಸಿಕೊಂಡಿರುವ ಅವರು ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಾರೆ. ಉಳಿದಂತೆ ಮಂಜುನಾಥ್ ಹೆಗಡೆ, ಶೈಲಶ್ರೀ, ಅಥರ್ವ ಪ್ರಕಾಶ್, ವಿನ್ಯಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ವಿ ಮನೋಹರ್ ಅವರ ಹಾಡುಗಳು ಗುಣಗುವಂತಿವೆ. ಪ್ರಸನ್ನ ಅವರು ತಮ್ಮ ಕ್ಯಾಮೆರದ ಮೂಲಕ ಮಲೆನಾಡಿನ ಸೌಂದರ್ಯವನ್ನು ಪ್ರೇಕ್ಷಕರ ಮುಂದೆ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.
____
Be the first to comment