ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತಕಾಲದ ಹೂಗಳು’ ಚಿತ್ರ ನವೆಂಬರ್ 10ರಂದು ತೆರೆ ಕಾಣಲಿದೆ.
ಹೊಸಬರ ಚಿತ್ರವನ್ನು ನೋಡಿ ಮೆಚ್ಚಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾವನ್ನು ಪ್ರೆಸೆಂಟ್ ಮಾಡುವ ಮೂಲಕ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
“‘ವಸಂತಕಾಲದ ಹೂಗಳು’ ಕಥೆಯನ್ನಷ್ಟೇ ನಂಬಿ ಮಾಡಿದ ಅಚ್ಚುಕಟ್ಟಾದ ಚಿತ್ರ. ವಿಭಿನ್ನ ಕಂಟೆಂಟ್ನೊಂದಿಗೆ ಬರುತ್ತಿರುವ ಹೊಸಬರ ಚಿತ್ರಗಳಿಗೆ ಉತ್ತೇಜನ ಕೊಡುವುದು ಈ ಹೊತ್ತಿನ ಅಗತ್ಯ ಎಂದು ನನಗನಿಸುತ್ತದೆ. ಹೀಗಾಗಿ ಈ ಉತ್ಸಾಹಿ ಯುವ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ಪರಿಸರ, ಕಾಲೇಜು ದಿನಗಳು, ತರಲೆ ಫ್ರೆಂಡ್ಸ್, ಮುದ್ದಾದ ಲವ್ ಸ್ಟೋರಿಗಳು ಇದನ್ನೆಲ್ಲ ನೀವು ಈ ಚಿತ್ರದಲ್ಲಿ ನೋಡಬಹುದು. ನಿಮ್ಮ ಟಿನೇಜ್ ಲೈಫ್ಗೆ ಮತ್ತೆ ಹೋಗಿ ಆ ನೆನಪುಗಳನ್ನು ಮೆಲುಕು ಹಾಕೋ ಹಾಗೆ ಈ ಚಿತ್ರ ಮಾಡುತ್ತದೆ ಎನ್ನುವ ನಂಬಿಕೆ ನನಗಿದೆ” ಎನ್ನುತ್ತಾರೆ ಆಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
ನಿರ್ದೇಶಕ ಸಚಿನ್ ಶೆಟ್ಟಿ, “ಒಂದು ಚಿತ್ರವನ್ನು ತಯಾರಿಸುವುದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚಿನ ಕಷ್ಟ ಜನರಿಗೆ ಆ ಚಿತ್ರವನ್ನು ತಲುಪಿಸುವುದರಲ್ಲಿದೆ. ಈ ನಿಟ್ಟಿನಲ್ಲಿ ನಾವು ಚಿತ್ರವನ್ನು ಪ್ರೆಸೆಂಟ್ ಮಾಡಲು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದೆವು. ಚಿತ್ರದ ಕಂಟೆಂಟ್ ಮೆಚ್ಚಿ ಅವರು ಚಿತ್ರವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದರು. ಇದು ನಮ್ಮ ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ವಸಂತಕಾಲದ ಹೂಗಳು’ ಚಿತ್ರದಲ್ಲಿ ಸಚಿನ್ ರಾಥೋಡ್ ಮತ್ತು ರಾಧಾ ಭಗವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಶೋಕ ರಾಥೋಡ್, ಸಿದ್ದು ರಸೂರೆ ನಿರ್ಮಾಣ ಮಾಡಿದ್ದಾರೆ. ಟಿನೇಜ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರ ಸಂಪೂರ್ಣವಾಗಿ ಬಿಜಾಪುರದಲ್ಲಿ ಚಿತ್ರೀಕರಣಗೊಂಡಿದೆ.
Be the first to comment