ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯುವ ಮೊದಲ ಕಂಬಳದಲ್ಲಿ ನಟರಾದ ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಯಶ್, ದರ್ಶನ್, ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಭಾಗವಹಿಸಲಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರು. ಅವರು ಕರಾವಳಿಯ ದೇವರು, ದೈವಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಅನುಷ್ಕಾ ಶೆಟ್ಟಿಯವರನ್ನು ಮೊದಲ ಬೆಂಗಳೂರು ಕಂಬಳಕ್ಕೆ ಅತಿಥಿಯಾಗಿ ಅಹ್ವಾನಿಸಲಾಗಿದೆ.
”ಸಾಂಪ್ರದಾಯಿಕ ಕಂಬಳ ಟ್ರ್ಯಾಕ್ 145 ಮೀಟರ್ ಉದ್ದವಿದೆ. ಬೆಂಗಳೂರು ಕಂಬಳಕ್ಕೆ 155 ಮೀಟರ್ ಉದ್ದದ ಕಂಬಳ ಕೆರೆ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವವರಿಗೆ ರೂ 1.50 ಲಕ್ಷ ನಗದು ಮತ್ತು ಎರಡು ಪವನ್ ಚಿನ್ನ ಸಿಗುತ್ತದೆ. ಭಾಗವಹಿಸುವ ಜೋಡಿ ಎಮ್ಮೆಗಳಿಗೆ ಶೀಲ್ಡ್ ಮತ್ತು ವಿಜೇತ ಓಟಗಾರ ಚಿನ್ನದ ಪದಕವನ್ನು ಪಡೆಯುತ್ತಾರೆ. ಎಮ್ಮೆಗಳ ಸಾಗಣೆಯ ವೆಚ್ಚಕ್ಕಾಗಿ ಕಂಬಳ ಮಾಲೀಕರಿಗೆ 50,000 ರೂ.ಗಳನ್ನು ನೀಡಲಾಗುತ್ತದೆ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
” ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಬೆಂಗಳೂರು ಕಂಬಳ ವೀಕ್ಷಿಸಲಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಅನುರಾಗ್ ಠಾಕೂರ್ ಅವರನ್ನು ಸಂಪರ್ಕಿಸಲಾಗುತ್ತಿದೆ. ಕಂಬಳಕ್ಕೆ ಏಳರಿಂದ ಎಂಟು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆಯಿದೆ” ಎಂದಿದ್ದಾರೆ.
ಬೆಂಗಳೂರು ಕಂಬಳಕ್ಕೆ 116 ಜೋಡಿ ಎಮ್ಮೆಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾಂತಾರ ಸಿನಿಮಾ ಬಳಿಕ ಕಂಬಳ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿದೆ. ಬೆಂಗಳೂರಿನ ಮೊದಲ ಕಂಬಳದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿ ಹಿಡಿಯುವ ಗುರಿಯನ್ನು ಹೊಂದಲಾಗಿದೆ.
——
Be the first to comment