ಇವರು ನಡೆಸುತ್ತಿರುವುದು ʻಇಟ್ಸಿ ಬಿಟ್ಸಿʼ ಅನ್ನೋ ಕರಕುಶಲ ವಸ್ತುಗಳ ಮಳಿಗೆಯ ಸರಣಿ. ಹವ್ಯಾಸ ಬಿಡುವಿದ್ದಾಗ ಮಗಳಿಗೆ ಲಂಚ್ ಬಾಕ್ಸ್ಗೆ ಹಾಕಿಕೊಡಲು ಸರಳವಾದ ವೈವಿಧ್ಯಮಯ ಅಡುಗೆ ಮಾಡುವುದು. ಈ ಹವ್ಯಾಸವೇ ಬೆಂಗಳೂರಿನ ಈ ಉದ್ಯಮಿಯನ್ನು ಸೋನಿ ಟಿವಿಯ ʻಮಾಸ್ಟರ್ ಶೆಫ್ ಇಂಡಿಯಾʼ ಅಡುಗೆ ಸ್ಪರ್ಧೆಯ ಟಾಪ್ ೧೨ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆ ಆಗುವಂತೆ ಮಾಡಿದೆ!
ಹರೀಶ್ ಕ್ಲೋಸ್ಪೇಟ್ ಅವರೇ ಇಂತಹ ಒಂದು ಅಪರೂಪದ ಸಾಧನೆ ಮಾಡಿರುವ ಕನ್ನಡಿಗ. ಅನೇಕ ಸುತ್ತುಗಳ ಕಠಿಣ ಆಡಿಷನ್ಗಳ ನಂತರ ಮಾಸ್ಟರ್ ಶೆಫ್ ಇಂಡಿಯಾ ಟಾಪ್ -೧ ೨ ರಲ್ಲಿ ಆಯ್ಕೆಯಾಗಿ ಬೆಂಗಳೂರಿನ ಹೆಸರಿಗೆ ಇನ್ನೊಂದು ಗರಿ ಮೂಡಿಸಿದ್ದಾರೆ.
ಇಟ್ಸಿ ಬಿಟ್ಸಿ ಅನ್ನೋ ಕರಕುಶಲ ವಸ್ತುಗಳ ೩೬ ಮಳಿಗೆಗಳು ದೇಶಾದ್ಯಂತ ಇವೆ. ಜೊತೆಗೆ ಆನ್ಲೈನ್ ಮಳಿಗೆ ಕೂಡ ಇದೆ. ೩೦೦೦ ಜನ ಮಹಿಳೆಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇವರ ಕರಕುಶಲ ವಸ್ತುಗಳಿಗೆ ಬೇಡಿಕೆ ಇದೆ. ಹೀಗೆ ಎಷ್ಟೇ ಕೆಲಸ ಕಾರ್ಯವಿದ್ದರೂ, ಬಿಡುವಿದ್ದಾಗ ಮಗಳ ಕಾಲೇಜು ಲಂಚ್ಬಾಕ್ಸ್ಗಾಗಿ ಹರೀಶ್ ಅಡುಗೆ ಮಾಡಿ ಕಳಿಸುತ್ತಿದ್ದರು. ಹಾಗೆಯೇ ಅಡುಗೆ ಮಾಡುವಾಗಿ ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಐಡಿಯಾ ಬಂತು. ೨೦೨೨ ರಲ್ಲಿ ʻಹ್ಯಾರಿಸ್ ಲಂಚ್ಬಾಕ್ಸ್ʼ ಅನ್ನೋ ಸೋಷಿಯಲ್ ಮೀಡಿಯಾ ಖಾತೆ ಶುರುಮಾಡಿದರು. ಮಗಳ ಊಟದ ಡಬ್ಬಿಗೆ ಮಾಡಿ ಕಳಿಸುತ್ತಿದ್ದ ಅಡುಗೆಗಳನ್ನ ಚಿತ್ರೀಕರಿಸಿ ಲೋಡ್ ಮಾಡತೊಡಗಿದರು. ಆಗಲೇ ಅನೇಕ ಅಡುಗೆ ಯುಟ್ಯೂಬ್ ವಾಹಿನಿಗಳಿದ್ದವು. ಆದರೆ ಹರೀಶ್ ಅವರು ತಯಾರಿಸುತ್ತಿದ್ದ ವಿವಿಧ ಪಾಕಗಳು, ಅವುಗಳ ವೈಶಿಷ್ಟ್ಯತೆ ಹಾಗೂ ಸರಳತೆಯಿಂದಾಗಿ ಗಮನ ಸೆಳೆದವು; ಉದ್ಯಮ ಸಂಬಂಧ ಪ್ರವಾಸ ಹೋದಾಗ ದೇಶ ವಿದೇಶಗಳಲ್ಲಿ ಸವಿಯುವ ಅಡುಗೆ ಮಾಡುವ ವಿಧಾನ ತಿಳಿದುಕೊಂಡೇ ಬರುತ್ತಿದ್ದರು. ಬಂದವರು, ತಮ್ಮದೇ ವಿಧಾನದಲ್ಲಿ ಪ್ರಯೋಗಿಸುತ್ತಿದ್ದರು. ಇದು ಹೊಸದೊಂದು ಪಾಕಲೋಕದ ಬಾಗಿಲು ತೆರೆಯಬಲ್ಲದು ಎಂದು ಆಗ ಅವರೂ ಊಹಿಸಿರಲಿಲ್ಲ. ಜೊತೆಗೆ ತಂದೆ ಮಗಳ ಬಾಂಧವ್ಯವೂ ವೀಕ್ಷಕರಿಗೆ ಇಷ್ಟವಾಯಿತು. ಕಡಿಮೆ ಅವಧಿಯಲ್ಲಿ ʻಹ್ಯಾರಿಸ್ ಲಂಚ್ಬಾಕ್ಸ್ʼ ವೈರಲ್ ಆಯಿತು.
ಹರೀಶ್ ಕ್ಲೋಸ್ಪೇಟ್ ಸೋನಿ ಟಿವಿಯ ʻಮಾಸ್ಟರ್ ಶೆಫ್ʼ ಪ್ರಕಟಣೆ ಹೊರಬಿದ್ದಾಗ ಆಡಿಷನ್ ಕೊಟ್ಟು ಒಂದು ಕೈ ನೋಡೇಬಿಡೋಣ ಅಂತ ನಿರ್ಧರಿಸಿದರು. ಅಲ್ಲಿ ವಿವಿಧೆಡೆ ಪಂಚತಾರಾ ಹೊಟೆಲ್ಗಳಲ್ಲಿ ಮಾಡುವಂಥ ಅಡುಗೆ ಕಲಿತವರು ಬರುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಆದರೂ ಧೈರ್ಯ ಮಾಡಿ ಮಗಳು, ಪತ್ನಿ ಹಾಗೂ ಕಂಪನಿಯ ನೌಕರರ ಬೆಂಬಲದೊಂದಿಗೆ ಮುನ್ನುಗಿದರು. ಅಚ್ಚರಿ ಎಂಬಂತೆ ಅನೇಕ ಕಠಿಣ ಸವಾಲುಗಳ ನಡುವೆ ಟಾಪ್ ೧೨ ಕ್ಕೆ ಆಯ್ಕೆ ಆಗಿ ಇತಿಹಾಸ ನಿರ್ಮಿಸಿದರು.
ʻಅಡುಗೆ ಮಾಡುವಾಗ ಯಾವುದನ್ನೂ ಅಳೆದು ಅಳೆದು ಹಾಕಬಾರದು. ಅಡುಗೆಯನ್ನು ಖುಷಿಯಿಂದ ಮಾಡಬೇಕು. ಜೊತೆಗೆ ಪ್ರೀತಿಯಿಂದ ಮಾಡುವ ಅಡುಗೆಗೆ ರುಚಿ ಜಾಸ್ತಿ. ಅದೇ ನನ್ನ ಯಶಸ್ಸಿನ ಗುಟ್ಟು ʼ ಎನ್ನುತ್ತಾರೆ ಹರೀಶ್ ಕ್ಲೋಸ್ಪೇಟ್.
ಸಾಮಾನ್ಯ ನೌಕರರು ನಿವೃತ್ತರಾಗುವ ತಮ್ಮ ೫೮ ನೇ ವಯಸ್ಸಿನಲ್ಲಿ ಹರೀಶ್ ಅವರು ಮಾಸ್ಟರ್ ಶೆಫ್-೨೦೨೩ನಲ್ಲಿ ಯಶಸ್ಸಿಯಾಗಿ ಪ್ರವೇಶ ಪಡೆಯುವುದರ ಮೂಲಕ ಹೊಸ ಹಾದಿ ತುಳಿದಿದ್ದಾರೆ. ಕ್ರಿಯಾಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇತರ ಸ್ಪರ್ಧಿಗಳ ನಡುವೆ ವೀಕ್ಷಕರು ಹೆಚ್ಚು ಹೆಚ್ಚು ಓಟ್ ಮಾಡಿದರೆ ಅಂತಿಮ ಸುತ್ತಿನವರೆಗೂ ಹೋಗುವ ಅವಕಾಶ ಸಿಗುತ್ತದೆ. ಕರ್ನಾಟಕದ ವೀಕ್ಷಕರು ಕಾರ್ಯಕ್ರಮ ನೋಡಿ ಓಟ್ ಮಾಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ತನಗಿದೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಹರೀಶ್ ಕ್ಲೋಸ್ಪೇಟ್.
Be the first to comment