ತೆರೆ ಮೇಲೆ ಸಾಧಕಿಯ ಯಶೋಗಾಥೆ

ಇತ್ತೀಚೆಗೆ ಚಂದನವನದಲ್ಲಿ ಸತ್ಯಘಟನೆಗಳ ಸಿನಿಮಾಗಳು ಜನರ ಮನಸೆಳೆಯುತ್ತಿದೆ. ಅದೇ ರೀತಿ ಬದುಕಿನಲ್ಲಿ ಸಾಧನೆ ಮಾಡಿರುವವರ ಚಿತ್ರಗಳು ಇಂದಿನ ಯುವಜನತೆಗೆ ಪ್ರೇರಣೆಯಾಗುತ್ತಿದೆ. ಆ ಸಾಲಿಗೆ ರಾಮನಗರದ ವಿ.ಆಶಾ ಸೇರ್ಪಡೆಯಾಗುತ್ತಾರೆ. ಇವರು 2016ರಿಂದ ಅನಾಥ ಶವಗಳಿಗೆ ವಾರಸುದಾರರಾಗಿ ಅಂದಾಜು 5000 ಶವಗಳಿಗೆ ಅಂತಿಮಕ್ರಿಯೆಗಳನ್ನು ಮಾಡಿಸುವಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಆಂಬುಲೆನ್ಸ್ ಚಾಲಕರಾಗಿರುವ ಮಾವ ಪ್ರವೀಣ್‌ಕುಮಾರ್ ನೀಡಿದ ಧೈರ್ಯ, ಪ್ರೋತ್ಸಾಹವೇ ಇಂತಹ ಕೈಂಕರ್ಯ ಮಾಡಲು ಸಾಧ್ಯವಾಗುತ್ತಿದೆ. ಯಾವುದೇ ಪ್ರಚಾರ, ನಿರೀಕ್ಷೆ ಬಯಸದೆ, ತಾನು ನೋಡಿದಂತ ಅನುಭವಗಳನ್ನು ಅಕ್ಷರರೂಪದಲ್ಲಿ ದಾಖಲಿಸುತ್ತಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿದ ನಿರ್ಮಾಪಕ ಲಯನ್.ಎಸ್.ವೆಂಕಟೇಶ್ ಆಕೆಯ ಜೀವನಾಧಾರಿತ ಕೃತಿಯನ್ನು ತೆರೆ ಮೇಲೆ ತರಲು ಮನಸು ಮಾಡಿದ್ದಾರೆ. ಅದರ ಫಲವೇ ‘ಬೇಲಿ ಹೂ’ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ.

ತಿರುಮಲ ಸಿನಿ ಎಂಟರ್‌ಟೈನ್‌ ಮೆಂಟ್ಸ್ ಹೆಸರಿನಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾದ ಮುಹೂರ್ತ ಸಮಾರಂಭವು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನ ಸನ್ನಿದಿಯಲ್ಲಿ ನಡೆಯಿತು. ಪೋಲೀಸ್ ಅಧಿಕಾರಿಗಳಾದ ಸುರೇಶ್,ದಿನಕರಶೆಟ್ಟಿ, ನರಸಿಂಹಮೂರ್ತಿ, ನಗರಸಭೆ ಆಯುಕ್ತ ನಾಗೇಶ್, ಉಪಾಧ್ಯಕ್ಷ ಸೋಮಶೇಖರ್‌ಮಾಣಿ, ಕರ್ನಾಟಕ ರಕ್ಷಣಾ ವೇದಿಕೆಯ ಎಂ.ಆರ್.ರಾವ್, ಮಾದೇಗೌಡ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ಸಬಾಸ್ಟಿಯನ್ ಡೇವಿಡ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಮಾಜವನ್ನು ಶುದ್ದ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಸೆಲಬ್ರಿಟಿ ತರಹ ಗೌರವಿಸಿ. ಕಾಣದ ದೇವರಿಗಿಂತ ಕಣ್ಣ ಮುಂದೆ ಕಾಣುವ ಇಂತಹವರನ್ನು ಆರಾಧಿಸಿ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ.

ರಿಯಲ್ ಆಶಾ.ವಿ ಪಾತ್ರವನ್ನು ರೀಲ್ ಮೇಲೆ ಶ್ವೇತಾಶ್ರೀನಿವಾಸ್ ಹಾಗೂ ‘ಕವಲುದಾರಿ’ ಖ್ಯಾತಿಯ ಸಂಪತ್ ಮಾವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಬಿ.ರಾಮಮೂರ್ತಿ, ಸಿದ್ದೆಗೌಡ, ಹನುಮಕ್ಕ, ರವೀಂದ್ರಸಿರಾವರ ಹಾಗೂ ಹಲವು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಿಂಕ್ ಸೌಂಡ್ ಬಳಸುತ್ತಿರುವುದರಿಂದ ಸಂಗೀತ ಸಂಯೋಜಕರನ್ನು ಆಯ್ಕೆ ಮಾಡಿಕೊಂಡಿಲ್ಲವಂತೆ. ಛಾಯಾಗ್ರಹಣ ಸಿಜು, ಸಂಭಾಷಣೆ- ಸಂಕಲನ ನಾಗೇಶ್ ನಿರ್ವಹಿಸುತ್ತಿದ್ದಾರೆ. ರಾಮನಗರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!