‘ಘೋಸ್ಟ್’ ನಿರ್ದೇಶಕ ಶ್ರೀನಿ ತಮ್ಮ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ ಬಳಿಕ ‘ಘೋಸ್ಟ್ 2’ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಹಿಟ್ ಆಗುತ್ತಿದ್ದಂತೆ ಸಿನಿಮಾದ ಸೀಕ್ವೆಲ್ ನ್ನು ಶ್ರೀನಿ ಘೋಷಿಸಿದ್ದರು. ಆದರೆ ‘ಘೋಸ್ಟ್ 2’ ಸಿನಿಮಾ ಸೆಟ್ಟೇರಲು ಕನಿಷ್ಟ ಒಂದೂವರೆ ವರ್ಷ ಬೇಕಿದೆ.
ಅಭಿಮಾನಿಗಳು ‘ಘೋಸ್ಟ್ 2’ ಸಿನಿಮಾದ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದೆ ಎಂದುಕೊಂಡಿದ್ದರು. ಆದರೆ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿದೆ. ಶ್ರೀನಿ ತಮ್ಮ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ ಬಳಿಕ ‘ಘೋಸ್ಟ್ 2’ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
ಶ್ರೀನಿ ಮೊದಲಿಗೆ ‘ಬೀರ್ಬಲ್ 2’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಬಳಿಕ ‘ಘೋಸ್ಟ್’ ಸಿನಿಮಾದ ಪವರ್ಫುಲ್ ಪಾತ್ರ ದಳವಾಯಿಯನ್ನು ಆಧರಿಸಿ ಪ್ರತ್ಯೇಕ ಸಿನಿಮಾ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ‘ಘೋಸ್ಟ್ 2’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
‘ಘೋಸ್ಟ್’ ಸಿನಿಮಾದ ಎರಡನೇ ಭಾಗ ನಿರ್ದೇಶನ ಮಾಡುವುದಾಗಿ ನಿರ್ದೇಶಕ ಶ್ರೀನಿ ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದರು. ‘ಘೋಸ್ಟ್’ ಸಿನಿಮಾದಲ್ಲಿ ಉತ್ತರ ಹೇಳದ ಕೆಲವು ಪ್ರಶ್ನೆಗಳಿಗೆ ‘ಘೋಸ್ಟ್ 2’ ಸಿನಿಮಾದಲ್ಲಿ ಉತ್ತರಿಸಲಿದ್ದೇವೆ ಎಂದು ಹೇಳಿದ್ದರು. ದಳವಾಯಿ ಯಾರು? ಅಂಡರ್ಗ್ರೌಂಡ್ನಲ್ಲಿ ಬೈಕ್ಗಳು ಹೇಗೆ ಬಂದವು? ಬೋಟ್ಗಳನ್ನು ಆಪರೇಟ್ ಮಾಡುತ್ತಿದ್ದವರು ಯಾರು? ಹೀಗೆ ಇನ್ನೂ ಕೆಲವು ಉತ್ತರ ಸಿಗದ ಪ್ರಶ್ನೆಗಳಿಗೆ ‘ಘೋಸ್ಟ್ 2’ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದಿದ್ದರು.
ಶಿವರಾಜ್ ಕುಮಾರ್ ಬಹಳ ಬ್ಯುಸಿಯಾಗಿದ್ದಾರೆ. ತಮಿಳಿನ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಅದರ ಜೊತೆಗೆ ‘ಭೈರತಿ ರಣಗಲ್’, ‘ಕರಟಕ ದಮನಕ’, ‘ಕಬ್ಜ 2’, ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳೆಲ್ಲ ಮುಗಿದ ಬಳಿಕ ಶಿವಣ್ಣ ‘ಘೋಸ್ಟ್ 2’ ಸಿನಿಮಾಕ್ಕೆ ಡೇಟ್ಸ್ ನೀಡಲಿದ್ದಾರೆ.
Be the first to comment