Raktaksha Movie :ರಕ್ತಾಕ್ಷ ಹೀರೋ ರೋಹಿತ್ ಗೆ ಸ್ಫೂರ್ತಿ ತುಂಬಿದ ರಿಷಬ್ ಶೆಟ್ಟಿ ವಿಡಿಯೋ!

ರಕ್ತಾಕ್ಷ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿರುವ ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ಅವರಿಗೆ ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಅವರ ವಿಡಿಯೋ ತುಣುಕು ಸಿನಿ ಪಯಣದಲ್ಲಿ ಸ್ಫೂರ್ತಿ ತುಂಬಿದೆ ಎಂದು ಅವರೇ ಹೇಳಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿದ್ದರೂ, ಶಾರ್ಟ್ ಮೂವಿ ಮಾಡುವಾಗ ನಾನು ಕ್ಯಾಮರಾ ಎದುರಿಸುವುದು ಕಷ್ಟ ಎಂದು ತಿಳಿದುಕೊಂಡೆ. ಇದರಿಂದ ಸಾಕಷ್ಟು ಬೇಸರ ಆಯಿತು. ಆದರೆ ಈ ವೇಳೆ ರಿಷಬ್ ಶೆಟ್ಟಿ ಅವರು, ತುಘಲಕ್ ಚಿತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದೇ ಹೋದರೂ ರಕ್ಷಿತ್ ಶೆಟ್ಟಿ ಅವರು ಯಾವ ರೀತಿ ಕಮ್ ಬ್ಯಾಕ್ ಮಾಡಿದರು ಎನ್ನುವ ಅನುಭವವನ್ನು ಹಂಚಿಕೊಂಡರು. ಇದು ನನಗೆ ಸ್ಪೂರ್ತಿಯಾಯಿತು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ಸಾಹ ತುಂಬಿತು ಎಂದು ಅವರು ಹೇಳಿದ್ದಾರೆ.

ಇಂಜಿನಿಯರಿಂಗ್ ಪದವಿ ಮಾಡಿರುವ ರೋಹಿತ್ ಅವರು ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ತಾಕ್ಷ ಅವರು ನಿರ್ಮಿಸುತ್ತಿರುವ ಮೊದಲನೆಯ ಚಿತ್ರ. ಇದು ಅವರು ನಟಿಸುತ್ತಿರುವ ಎರಡನೆಯ ಚಿತ್ರ ಆಗಿದೆ.

ರಕ್ತಾಕ್ಷ ಸಿನಿಮಾದ ಬಗ್ಗೆ ಮಾತನಾಡಿರುವ ಅವರು, ಇದು ಸೇಡಿನ ಕಥೆ ಆಗಿದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಡೆಯುವ ನೈಜ ಘಟನೆಯನ್ನು ಆಧರಿಸಿ ರಕ್ಷಕರಿಗೆ ಸಂದೇಶವನ್ನು ನೀಡುವ ಯತ್ನ ಮಾಡಲಾಗಿದೆ. ಇದು ಥ್ರಿಲ್ಲರ್ ಜಾನರ್ ಆಗಿದೆ ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹಳ್ಳಿಯಿಂದ ಬಂದ 10 – 15 ಯುವಕರಿಗೆ ಅವರ ಇಷ್ಟದ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಈಗಾಗಲೇ ಸಿನಿಮಾದ ಬಗ್ಗೆ ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕದ ಎಲ್ಲಾ ಕಡೆ ಸಿನಿಮಾದ ಬಗ್ಗೆ ಪ್ರಚಾರ ಮಾಡಲಾಗುವುದು. ಬಳಿಕ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್ ಮಾಡಲಾಗುವುದು ಎಂದು ಹೇಳಿದರು.

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ವಿಲನ್ ಆಗಿ ನಟಿಸಿದ್ದಾರೆ. ರೂಪ ರಾಯಪ್ಪ, ರಚನಾ ದಶರಥ, ಅರ್ಚನಾ ಕೊಟ್ಟಿಗೆ, ವಿಲಾಸ್ ಕುಲಕರ್ಣಿ ಇತರರು ಚಿತ್ರದಲ್ಲಿದ್ದಾರೆ. ವಸಿಷ್ಠ ಸಿಂಹ ಹಾಡಿರುವ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯ ಆಗಿದೆ ಎಂದು ಅವರು ಹೇಳಿದ್ದಾರೆ.

ನನಗೆ ಸಿನಿಮಾ ಎಂದರೆ ಮನರಂಜನೆ. ಅದರ ಜೊತೆಗೆ ಅದರಲ್ಲಿ ಸಾಮಾಜಿಕ ವಿಷಯ ಇರಬೇಕು. ಚಿತ್ರದಲ್ಲಿ ಈ ಅಂಶಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!