ಯೋಗರಾಜ ಭಟ್ ನಿರ್ದೇಶನದ ಗರಡಿ ಚಿತ್ರದ ಮತ್ತೊಂದು ಹಾಡು ಬಡವನ ಹೃದಯ ಸೋಮವಾರ ಬಿಡುಗಡೆಯಾಗಿದ್ದು ವೈರಲ್ ಆಗುತ್ತಿದೆ.
ಬಿಡುಗಡೆ ಆದ ವಿರಹ ಗೀತೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಪಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
ಗರಡಿ ಚಿತ್ರ ನವೆಂಬರ್ 10ರಂದು ಬಿಡುಗಡೆ ಆಗಲಿದೆ. ಈಗಾಗಲೇ ಈ ಚಿತ್ರದ ಮನಮೋಹಕವಾದ ಎರಡು ಹಾಡುಗಳು ಬಿಡುಗಡೆಗೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಹು ನಿರೀಕ್ಷಿತ ಗರಡಿ ಚಿತ್ರದಲ್ಲಿ ಯಶಸ್ ಸೂರ್ಯ ಹಾಗೂ ಸೋನಾಲ್ ಮಾಂತೇರೋ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡಿನ ಬಗ್ಗೆ ಮಾತನಾಡಿರುವ ನಿರ್ದೇಶಕ ಯೋಗರಾಜ್ ಭಟ್, ಒಂದು ವರ್ಷದ ಶ್ರಮ ಈ ಗೀತೆಗೆ ಇದೆ. ಇದಕ್ಕಾಗಿ ತುಂಬಾ ಶಾಟ್ಸ್ ತೆಗೆದುಕೊಳ್ಳಲಾಗಿದೆ. ಈ ಹಾಡನ್ನು ಬೆಂಗಳೂರು, ಬಾದಾಮಿ, ಹಿರೇಕೆರೂರಿನ ದುರ್ಗಾದೇವಿ ಕೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೂಟ್ ಮಾಡಲಾಗಿದೆ ಎಂದಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಇದು ಹುಟ್ಟಿದ ಹಾಡು ಆಗಿದೆ. ಹೇಗಿದೆಯಿಂದ ನಾಯಕನ ಪಾತ್ರ ಎಲ್ಲೆಲ್ಲಿಗೋ ಹೋಗುತ್ತದೆ. ನಾಯಕ ತನ್ನ ಹುಡುಗಿಯನ್ನು ಶ್ರೀಮಂತನಿಗೆ ಪರಿಚಯಿಸಿ ತಪ್ಪು ಮಾಡುತ್ತಾನೆ. ನಾಯಕ ತನ್ನ ಹುಡುಗಿಯನ್ನು ನೆನಪಿಸಿಕೊಂಡು ಈ ಹಾಡು ಹಾಡುತ್ತಾನೆ ಎಂದು ಹೇಳಿದ್ದಾರೆ.
ನಾಯಕ ನಟ ಯಶಸ್ ಸೂರ್ಯ ಅವರು ಇದು ಮರೆಯಲಾಗದ ಅನುಭವ ನೀಡಿದ ಸಾಂಗ್ ಆಗಿದೆ. ಈ ಹಾಡನ್ನು ದರ್ಶನ್ ಅವರಿಗೆ ಕೇಳಿಸಿದಾಗ ಅವರು ತುಂಬಾ ಅದ್ಭುತವಾಗಿದೆ ಎಂದು ಮೆಚ್ಚಿಕೊಂಡರು ಎಂದರು.
ನಿರ್ಮಾಪಕ ಬಿಸಿ ಪಾಟೀಲ್ ಅವರು ಈ ಹಾಡನ್ನು ಕೇಳಿದಾಗ ಮುಂಗಾರು ಮಳೆಯ ಅನಿಸುತಿದೆ ಹಾಡು ನೆನಪಿಗೆ ಬಂತು. ಬಳಿಕ ಇದನ್ನು ದರ್ಶನ್, ರಚಿತಾ ರಾಮ್, ನನ್ನ ಸಹೋದರನಿಗೆ ಕೇಳಿಸಿದೆ. ಎಲ್ಲರಿಂದಲೂ ಉತ್ತಮ ರೆಸ್ಪಾನ್ಸ್ ಬಂದಿದೆ ಎಂದರು.
ನವೆಂಬರ್ 1ರಂದು ರಾಣೆಬೆನ್ನೂರಿನಲ್ಲಿ ಚಿತ್ರದ ದೊಡ್ಡ ಮನರಂಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸಲಿದ್ದಾರೆ. ಈಗಾಗಲೇ 10 ಸಾವಿರ ಆಟೋಗಳ ಮೂಲಕ ಪ್ರಚಾರ ಶುರು ಮಾಡಲಾಗಿದೆ. 2016ರ ನಂತರ ಸೌಮ್ಯ ಫಿಲಂಸ್ ಮೂಲಕ ಹೊರ ಬರುತ್ತಿರುವ ಚಿತ್ರ ಇದಾಗಿದೆ ಎಂದು ಅವರು ಹೇಳಿದ್ದಾರೆ.
___

Be the first to comment