Puneeth Rajkumar : ಭತ್ತದ ತಳಿ ಮೂಲಕ ಅಪ್ಪು ಚಿತ್ರ ಬರೆದ ರೈತ!

ರಾಯಚೂರಿನ ರೈತರೊಬ್ಬರು ಭತ್ತದ ತಳಿಗಳ ಮೂಲಕ ಅಪ್ಪು ಚಿತ್ರ ಬರೆದು ಮೆಚ್ಚುಗೆ ಪಡೆದಿದ್ದಾರೆ.

ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದಿದ್ದು, ಪುನೀತ್ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.

ತೆಲಂಗಾಣ, ಗುಜರಾತ್‌ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದಿದ್ದಾರೆ.

ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ ಈ ರೈತ.

ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಎನ್ನುವ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತ ಈ ರೈತ ಅಪ್ಪು ದ್ವಿತೀಯ ಪುಣ್ಯಸ್ಮರಣೆ ಸಂದರ್ಭ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಹಲವಾರು ಅಭಿಮಾನಿಗಳು ಈ ರೈತನ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿ ಬಂದು ಪೋಟೋ ತೆಗೆದುಕೊಳ್ಳುತ್ತಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!