ಕರಾವಳಿ ಭಾಗದ ಕಥೆ ಇರುವ ಚಿತ್ರ ‘ಕುದ್ರು’ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ಭಾಸ್ಕರ್ ನಾಯಕ್ “ನಾನು ಮೂಲತಃ ಉಡುಪಿಯವನು. ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ ‘ಕುದ್ರು’ ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ನಾನೇ ಬರೆದಿದ್ದೇನೆ. ಮಧು ವೈ ಜಿ ಹಳ್ಳಿ ನಿರ್ದೇಶನ ಮಾಡಿದ್ದಾರೆ” ಎಂದಿದ್ದಾರೆ.
“‘ಕುದ್ರು’ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಡುಪಿ, ಬೆಂಗಳೂರು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದೀಗ ಅಭಿಮಾನ್ ಸ್ಟುಡಿಯೋದಲ್ಲಿ ಹಾಡಿನ ಚಿತ್ರೀಕರಣ ಮಾಡಿತ್ತಿದ್ದೇವೆ. ಈ ಹಾಡಿಗೆ ಹೆಜ್ಜೆ ಹಾಕಲು ದೂರದ ದೆಹಲಿಯಿಂದ ನಟಿ ನಮ್ರತಾ ಮಲ್ಲ ಬಂದಿದ್ದಾರೆ” ಎಂದು ಕಥೆ ಬರೆದಿರುವ ನಿರ್ಮಾಪಕರು ಹೇಳಿದ್ದಾರೆ.
“ಕುದ್ರು” ನನ್ನ ಮೊದಲ ನಿರ್ದೇಶನದ ಚಿತ್ರ. ಒಂದು ಸಣ್ಣ ದ್ವೀಪದಲ್ಲಿ ಬೇರೆ ಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು ಉಂಟು ಮಾಡುತ್ತದೆ. ಬಳಿಕ ಬಂದ ತೊಂದರೆಯನ್ನು ನಿವಾರಣೆ ಮಾಡಿಕೊಂಡು ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ” ಎಂದು ನಿರ್ದೇಶಕ ಮಧು ವೈ ಜಿ ಹಳ್ಳಿ ತಿಳಿಸಿದ್ದಾರೆ.
ಚಿತ್ರದಲ್ಲಿ ಹರ್ಷಿತ್ ಶೆಟ್ಟಿ, ಗಾಡ್ವಿನ್ ಹಾಗೂ ಫರ್ಹಾನ್ ನಾಯಕರಾಗಿ ನಟಿಸಿದ್ದಾರೆ. ಪ್ರಿಯಾ ಹೆಗ್ಡೆ, ವಿನುತ ಹಾಗೂ ಡೈನ ಡಿಸೋಜ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಮೂವರು ನಾಯಕರು ನಮ್ರತಾ ಅವರೊಂದಿಗೆ ಅಭಿನಯಿಸುತ್ತಿರುವ ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.
ಪ್ರತೀಕ್ ಕುಂಡು ಸಂಗೀತ ನಿರ್ದೇಶನ, ದೀಪು ಛಾಯಾಗ್ರಹಣ ಚಿತ್ರಕ್ಕಿದೆ. ಎಪ್ಪತ್ತಕ್ಕೂ ಅಧಿಕ ಭಾಗದ ಚಿತ್ರೀಕರಣ ರೈನ್ ಎಫೆಕ್ಟ್ ನಲ್ಲೇ ನಡೆದಿರುವುದು ಚಿತ್ರದ ವಿಶೇಷ ಎಂದು ತಂಡ ತಿಳಿಸಿದೆ.
_____
Be the first to comment