ಒಂದಷ್ಟು ಸಮಾನ ಮನಸ್ಕರು ಸೇರಿಕೊಂಡು ಪ್ರತಿಭಾವಂತರಿಗೆ ಉದ್ಯೋಗ ನೀಡುವ ಸಲುವಾಗಿ ಟಿಎಂಟಿ ಪ್ರೊಡಕ್ಷನ್ಸ್ ಮೂಲಕ ’ಆರಾರಿರಾರೋ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವೃತ್ತಿ ಇಂಜಿನಿಯರ್, ಪ್ರವೃತ್ತಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಂದೀಪ್ಶೆಟ್ಟಿ ಕಥೆ ಬರೆದು ಆಕ್ಷನ್ ಕಟ್ ಹೇಳಿರುವುದು ಎರಡನೇ ಅನುಭವ. ತಾಯಿ ಮಗುವಿಗೆ ಶೀರ್ಷಿಕೆ ಪದವನ್ನು ಬಳಸುತ್ತಾಳೆ. ಆದರೆ ಚಿತ್ರದಲ್ಲಿ ಮಗ ತಾಯಿಗೆ ಇದನ್ನು ಹೇಳುವುದು ಸೂಕ್ತ ಅನಿಸಿರುವುದರಿಂದ ಆರಾರಿ ರಾರೋ ಟೈಟಲ್ ಬಳಸಲಾಗಿದೆಯಂತೆ.
ಸಿನಿಮಾವು ಭಾವನೆಗಳ ಮೌಲ್ಯವನ್ನು ಸಾರಲಿದೆ. ಕಥೆಯಲ್ಲಿ ಮುಗ್ದ ಕಳ್ಳನೊಬ್ಬ ಅಜ್ಜಿಯನ್ನು ಯಾವ ರೀತಿ ಆರೈಕೆ ಮಾಡುತ್ತಾನೆ. ಇದಕ್ಕೆ ಕಾರಣವೇನು? ಸಂಬಂಧವಿಲ್ಲದ ಆಕೆಯನ್ನು ನೋಡಿಕೊಳ್ಳುವ ಪ್ರಮೇಯವಾದರೂ ಏತಕ್ಕೆ ಬಂತು. ಹಾಗೆಯೇ ಪ್ರತಿಯೊಂದು ಜೀವಿಗೂ ನೈಸರ್ಗಿಕ ವಾತಾವರಣದಲ್ಲಿ ಬದುಕಬೇಕೆಂಬ ಆಸೆ ಇರುತ್ತದೆ ಎಂಬುದನ್ನು ಸನ್ನಿವೇಶಗಳ ಮೂಲಕ ಅರ್ಥಪೂರ್ಣವಾಗಿ ತೋರಿಸಲಾಗಿದೆ. ನಾಯಕನಾಗಿ ಪ್ರಸನ್ನಶೆಟ್ಟಿ, ಅಜ್ಜಿಯಾಗಿ ಮುತ್ಸದ್ದಿ ವೀಣಾಕಾಮತ್, ಮತ್ತೋಂದು ಮುಖ್ಯ ಪಾತ್ರದಲ್ಲಿ ನಿರೀಕ್ಷಾಶೆಟ್ಟಿ ಉಳಿದಂತೆ ಜೀವ, ಪಿಂಕಿರಾಣಿ, ರೂಪಾಶೆಟ್ಟಿ, ಮಂಗೇಶಭಟ್, ಗೌತಂ ಮುಂತಾದವರು ನಟಿಸಿದ್ದಾರೆ.
ಎಮಿಲ್ ಸಂಗೀತ, ಛಾಯಾಗ್ರಹಣ ಮಯೂರಶೆಟ್ಟಿ, ಸಂಕಲನ ಕಾರ್ತಿಕ್.ಕೆ.ಎಂ, ನೃತ್ಯ ಪ್ರಣವ್, ತಾಂತ್ರಿಕ ನಿರ್ದೇಶನ ವಿನಯ್ಪ್ರೀತಂ, ಕ್ರಿಯೆಟೀವ್ ಮುಖ್ಯಸ್ಥ ರಾಘವ, ಮುಖ್ಯ ಸಲಹೆಗಾರ ಆನಂದ್ಯಾದವಾಡ, ಕಾರ್ಯಕಾರಿ ನಿರ್ಮಾಪಕ ನವೀನ್ ಚಂದ್ರ ವಿಟ್ಲ, ಪ್ರಚಾರದ ಮುಖ್ಯಸ್ಥ ಶರಣ್ ಪೂಣಚ್ಚ ಅವರೆಮಾದಂಡ ಅವರದಾಗಿದೆ. ವಿಟ್ಲ ಸುಂದರ ತಾಣಗಳಲ್ಲಿ 16 ದಿನಗಳ ಚಿತ್ರೀಕರಣ ನಡೆಸಲಾಗಿದೆ.
ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೆ ಮುಂಬೈ ಹಾಗೂ ಆಸ್ಟ್ರೇಲಿಯಾ ಕಡೆಗಳಿಂದ ವಿತರಕರು ಆಹ್ವಾನ ನೀಡಿದ್ದಾರೆ. ತಮಿಳು ಭಾಷೆಗೆ ಡಬ್ಬಿಂಗ್ ಮಾಡಲು ಬೇಡಿಕೆ ಬಂದಿರುವುದು ತಂಡಕ್ಕೆ ಸಂತಸ ತಂದಿದೆ. ಸದ್ಯ ಸಿನಿಮಾವು ಮಾಲ್ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮೊನ್ನೆಯಷ್ಟೇ ಮಾಧ್ಯಮದವರಿಗೆಂದು ವಿಶೇಷ ಶೋ ಏರ್ಪಡಿಸಿ, ತಂಡವು ಮಾಹಿತಿಗಳನ್ನು ಹಂಚಿಕೊಂಡಿತು.
Be the first to comment