ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಜೀವನ ಕಥನವನ್ನು ಒಳಗೊಂಡ ಕ್ರಾಂತಿವೀರ ಸೆಪ್ಟೆಂಬರ್ 29ಕ್ಕೆ ತೆರೆಗೆ ಬರಲಿದೆ.
ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಮೂವರು ಕ್ರಾಂತಿಕಾರಿಗಳ ಬಯೋಪಿಕ್ ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಈಗಾಗಲೇ ಕಿರು ಚಿತ್ರಗಳು ಹಾಗೂ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಆದತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಕ್ರಾಂತಿವೀರ ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ಅವರು ಕಾಣಿಸಿಕೊಂಡಿದ್ದಾರೆ. ಸುಖದೇವ್ ಆಗಿ ವಾದಿರಾಜ್ ಹಾಗೂ ರಾಜಗುರು ಆಗಿ ಹೊಸ ಮುಖ ಲಕ್ಷ್ಮಣ್ ಅಭಿನಯಿಸಿದ್ದಾರೆ. ಇದೇ ವೇಳೆಗೆ ಖ್ಯಾತ ನಟ ಪ್ರಮೋದ್ ಶೆಟ್ಟಿ ಅವರು ಚಂದ್ರಶೇಖರ ಆಜಾದ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಲಾಲಾ ಲಜಪತ ರಾಯ್ ಆಗಿ ಕಾಣಿಸಿಕೊಂಡಿದ್ದಾರೆ.
ಹಿರಿಯ ನಟಿ ಭವಾನಿ ಪ್ರಕಾಶ್ ಅವರು ಭಗತ್ ಸಿಂಗ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಜೋಸೈಮನ್ ಅವರು ಭಗತ್ ಸಿಂಗ್ ಅವರ ಅಜ್ಜನ ಪಾತ್ರವನ್ನು ಮಾಡಿದ್ದಾರೆ. ಧರ್ಮ ಅವರು ಜೈಲರ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಲ್ಲದೆ ಶಿವಮೊಗ್ಗದ ಜೈಲಿನಲ್ಲಿ ಗಲ್ಲುಗಂಬದ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಬಾಗೇಪಲ್ಲಿ ಬಳಿ ಜಲಿಯನ್ ವಾಲಾಬಾಗ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಉಳಿದಂತೆ ಕೆಜಿಎಫ್, ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ಚಿತ್ರವನ್ನು ಶೂಟಿಂಗ್ ಮಾಡಲಾಗಿದೆ.
ಹಿರಾ ಲಾಲ್ ಮೂವೀಸ್ ಹಾಗೂ ಎಬಿ ನೆಟ್ವರ್ಕ್, ದೃತಿ ಕ್ರಿಯೇಶನ್ಸ್, ಕಲ್ಲೂರ ಸಿನಿಮಾಸ್ ಮೂಲಕ ಚಂದ್ರಕಲಾ ಟಿ ಆರ್, ಮಂಜುನಾಥ ನಾಯಕ್, ಅರ್ಜು ರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ತ್ರಿವಿಕ್ರಮ ಸಾಫಲ್ಯ, ಪ್ರಶಾಂತ್ ಕಲ್ಲೂರ ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ.
ಅದತ್ ಅವರು ತಮ್ಮ ಸ್ನೇಹಿತ ನೀಲಕಂಠ ಅವರೊಂದಿಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಜೊತೆಗೆ ಅದತ್ ಅವರು ಕ್ಯಾಮರಾ ಕೆಲಸ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.
ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಪ್ರತಾಪ್ ಎಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯ ಆಗಿವೆ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
____
Be the first to comment