ಬಹುನಿರೀಕ್ಷಿತ ‘ಸಲಾರ್’ ಸಿನಿಮಾ ಬಿಡುಗಡೆ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ.
ಸೆ.28ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
ಪ್ರಶಾಂತ್ ನೀಲ್ ಆಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಮೊದಲ ಭಾಗಕ್ಕೆ ‘ಸೀಸ್ ಫೈರ್’ ಎಂಬ ಅಡಿಬರಹವಿದೆ. ಸಿನಿಮಾ ‘ಕೆ.ಜಿ.ಎಫ್.’ನಂತೆ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ‘ಸಲಾರ್’ ಬಿಡುಗಡೆ ಮುಂದಕ್ಕೆ ಹೋಗಲಿದೆ ಎನ್ನುವ ಮಾತುಗಳು ಹಿಂದೆಯೇ ಕೇಳಿಬಂದಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ಬಿಡುಗಡೆ ಸೆ.28ಕ್ಕೆ ನಿಗದಿಯಾದಾಗ ಇದು ಖಚಿತವಾಗಿತ್ತು. ಆದರೆ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈ ಬಗ್ಗೆ ಅಧಿಕೃತವಾಗಿ ಘೋಷಿಸಿರಲಿಲ್ಲ.
ಬುಧವಾರ ಈ ಬಗ್ಗೆ ಪೋಸ್ಟ್ ಮಾಡಿರುವ ಹೊಂಬಾಳೆ, ‘ಸಲಾರ್‌ಗೆ ನೀವು ನೀಡುತ್ತಿರುವ ಬೆಂಬಲಕ್ಕೆ ಆಭಾರಿ. ಕಾರಣಾಂತರಗಳಿಂದ ಸೆ.28ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಬಹಳ ಎಚ್ಚರಿಕೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇವೆ. ಅದ್ಭುತವಾದ ಸಿನಿಮಾ ಅನುಭವವನ್ನು ನೀಡುವ ಗುರಿ ನಮ್ಮದು. ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನು ನಿಮ್ಮ ಮುಂದೆ ಇಡಬೇಕು ಎನ್ನುವುದಕ್ಕೆ ತಂಡವು ಶ್ರಮಿಸುತ್ತಿದೆ. ಶೀಘ್ರದಲ್ಲೇ ಬಿಡುಗಡೆಯ ಪರಿಷ್ಕೃತ ದಿನಾಂಕವನ್ನು ಘೋಷಿಸುತ್ತೇವೆ. ‘ಸಲಾರ್’ಗೆ ಅಂತಿಮ ಸ್ಪರ್ಶ ನೀಡಲಾಗುತ್ತಿರುವ ಈ ಸಂದರ್ಭದಲ್ಲಿ ನೀವೆಲ್ಲರೂ ಜೊತೆಗಿರಿ’ ಎಂದು ತಿಳಿಸಿದೆ.
ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ ಬಳಿ 14 ಬೃಹತ್ ಸೆಟ್‌ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಸನ್ ಹೀಗೆ ಎಲ್ಲ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ‘ಸಲಾರ್’ ಚಿತ್ರತಂಡದಲ್ಲಿದ್ದಾರೆ.
ವಿಜಯ್ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸುಮಾರು ₹400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ.
ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
Be the first to comment