“ದ ಜಡ್ಜ್ ಮೆಂಟ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ನಿರ್ದೇಶಕ ಗುರುರಾಜ ಕುಲಕರ್ಣಿ(ನಾಡಗೌಡ), ಇಂದಿನ ಯುವಜನತೆಯ ಮಧ್ಯೆ ಟ್ರೆಂಡ್ ಆಗುವ “ಪಬ್ ಸಾಂಗ್” ಒಂದನ್ನು “ಡೆಕ್ ಆಫ್ ಬ್ರೆವ್ಯುಸ್” ಪಬ್ ನಲ್ಲಿ “ದ ಜಡ್ಜ್ ಮೆಂಟ್” ಚಿತ್ರಕ್ಕಾಗಿ ಅದ್ಧೂರಿಯಾಗಿ ಚಿತ್ರಿಸಿಕೊಂಡಿದ್ದಾರೆ.  ಈ ಹಾಡಿಗೆ ಹೆಜ್ಜೆ ಹಾಕಿದವರು ದಿಗಂತ್ ಮತ್ತು ಧನ್ಯ ರಾಮಕುಮಾರ್. ಇವರಿಬ್ಬರಿಗೂ ಜೊತೆಯಾದವರು ಕಲಾವಿದರಾದ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್. ಈ ಹಾಡಿಗಾಗಿ ಸುಮಾರು ೭೫ ಜನ ನೃತ್ಯ ಕಲಾವಿದರು ಮತ್ತು ೫೦ ಜನ ಸಹ ಕಲಾವಿದರನ್ನು ಬಳಸಿಕೊಳ್ಳಲಾಯಿತು. ಹಾಡನ್ನು ಸಂಯೋಜಿಸಿದ ಅನೂಪ್ ಸೀಳಿನ್ ಮತ್ತು ಹಾಡು ಬರೆದ ಪ್ರಮೋದ್ ಮರವಂತೆ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. “ಈ ಹಾಡು ವರ್ಷದ ಸೂಪರ್ ಹಿಟ್ ಹಾಡು ಆಗುವದು ಪಕ್ಕಾ” ಎನ್ನುವದು ಚಿತ್ರೀಕರಣದಲ್ಲಿ ಭಾಗಿಯಾದವರ ಅನಿಸಿಕೆ. ಹೊಸತನದ ಬೀಟ್ಸ್ ಇರುವ ಈ ಹಾಡಿಗಾಗಿ, ಬಾಲಿವುಡ್ ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾರವರನ್ನು, ಸಿನಿಮಾ ತಂಡ ವಿಶೇಷವಾಗಿ ಆಹ್ವಾನಿಸಿದ್ದರು. ಹಾಡಿನ ನೃತ್ಯ ಸಂಯೋಜನೆ ಮಾಡಿದ್ದು ಯುವ ನಿರ್ದೇಶಕ ರಾಮ್ ಕಿರಣ್ ಮತ್ತು ಅವರ ತಂಡ.

“ದ ಜಡ್ಜ್ ಮೆಂಟ್” ಕಥೆ ಲೀಗಲ್ ಥ್ರಿಲ್ಲರ್ ಶೈಲಿಯಾಗಿದ್ದು, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ)ಯವರ ಗಟ್ಟಿ ನಂಬಿಕೆ. ಕ್ರೇಜಿ ಸ್ಟಾರ್ ಡಾ|| ವಿ. ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗುರುರಾಜ ಕುಲಕರ್ಣಿ (ನಾಡಗೌಡ) ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ, ಪ್ರಮೋದ್ ಮರವಂತೆ ಗೀತರಚನೆ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನವಿದೆ. ಎಂ ಎಸ್ ರಮೇಶ್  ಸಂಭಾಷಣೆ ಬರೆದಿದ್ದಾರೆ. ಸ್ಕ್ರಿಪ್ಟ್ ಸೂಪರವೈಸರ್ ಆಗಿ ಪಿ. ವಾಸುದೇವ ಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!