Paryaya New Movie :“ಪರ್ಯಾಯ”ಚಿತ್ರದ ಟೀಸರ್ ಹಾಗೂ ಲಿರಿಕಲ್ ಹಾಡು ಬಿಡುಗಡೆ.

 ಮೂವರು ಅಂಗವಿಕಲರ ಸುತ್ತ ನಡೆಯುವ ಕಥಾಹಂದರವನ್ನು ಹೆಣೆದಿರುವ ನಿರ್ದೇಶಕ ರಮಾನಂದ ಮಿತ್ರ ಅವರು ಪರ್ಯಾಯ ಹೆಸರಿನ ಚಲನಚಿತ್ರವನ್ನು ನಿರೂಪಿಸಿದ್ದಾರೆ‌. ಈ ಚಿತ್ರ ಬಿಡುಗಡೆಯ ಹಂತ ತಲುಪಿದೆ.

ಬೆಳಗಾವಿ ಮೂಲದ ಸ್ನೇಹಿತರೆಲ್ಲ ಸೇರಿ ಮಾಡಿರುವ ಈ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗೂ ಶ್ರೀಮತಿ ಇಂದುಮತಿ ರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ರಾಜ್ ಕುಮಾರ್ ಅವರು ಅಂಧನ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಾಜ್ ಕುಮಾರ್, ಮೂಲತಃ ನಾನೊಬ್ಬ ಕೃಷಿಕ. ಒಂದೊಳ್ಳೆ ಚಿತ್ರ ಮಾಡಬೇಕೆಂದು ಬಹಳ ದಿನಗಳಿಂದ ಆಸೆಯಿತ್ತು.
ಅಲ್ಲದೆ ನಾನು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ, ಅವರ ಕೈನಿಂದಲೇ ಸಿನಿಮಾ ಲಾಂಚ್ ಮಾಡಿಸಬೇಕೆಂಬ ಆಸೆಯಿತ್ತು. ಕಷ್ಟಪಟ್ಟು, ಇಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮೂರಲ್ಲಿ ಒಂದು ಘಟನೆ ನಡೆದಿತ್ತು. ಅದೇ ಈ ಚಿತ್ರ ಆಗಲು ಕಾರಣ. ಲಂಬಾಣಿ ಭಾಷೆಯಲ್ಲಿ ನಾನು ಸುಮಾರು ೨೦ಕ್ಕೂ ಹೆಚ್ಚು ಅಲ್ಬಮ್ ಸಾಂಗ್ ಮಾಡಿದ್ದೇನೆ. ಬೆಳಗಾವಿ ನಗರ ಅಲ್ಲದೆ ಚಿಗುಳೆ ಎಂಬ ಹಳ್ಳಿಯಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು.

ನಿರ್ದೇಶಕ ರಮಾನಂದ್ ಮಿತ್ರ ಮಾತನಾಡಿ ಪ್ರತಿಯೊಬ್ಬರೂ ಜೀವನದಲ್ಲಿ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಹೋಗುತ್ತೇವೆ. ಅದು ಸರಿಯಾಗಿರದಿದ್ರೆ ಏನಾಗುತ್ತೆ ಅನ್ನೋದೇ ಈ ಚಿತ್ರದ ಕಥೆ. ಮೂರು ಪಾತ್ರಗಳ ಮೂಲಕ ಮನುಷ್ಯನ ಆಸೆಯನ್ನು ತೋರಿಸಲಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ಮೂವರು ಅಂಗವಿಕಲರು ತಮ್ಮ ಬದುಕು ಕಟ್ಟಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಾರೆ. ಅವರ ಜೀವನ ಮುಂದೆ ಏನೆಲ್ಲ ತಿರುವು ಪಡೆಯಿತು ಎಂದು ಈ ಚಿತ್ರದ ಮೂಲಕ ಹೇಳಿದ್ದೇವೆ. ಬೆಳಗಾವಿ, ಗೋವಾ ಗಡಿಯಲ್ಲಿ, ಹೆಚ್ಚಾಗಿ ಕೊಂಕಣಿ ಮಾತಾಡುವ ಹಳ್ಳಿಯೊಂದರಲ್ಲಿ ಚಿತ್ರವನ್ನು ಚಿತ್ರೀಕರಿಸಿದ್ದೇವೆ. ಕಥೆಯಲ್ಲಿ ನಾಯಕಿಯ ಪಾತ್ರವಿಲ್ಲ, ನಾಯಕನ ತಾಯಿ, ಹೆಂಡತಿ ಇರುತ್ತದೆ. ಸೆಪ್ಟೆಂಬರ್ ೮ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದರು.

ಕಿವಿ ಕೇಳಿಸದ ಕಿವುಡನ‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮುರಗೇಶ್ ಮಾತನಾಡಿ ಮೂಲತಃ ನಾನೊಬ್ಬ ಪತ್ರಕರ್ತ. ಅಪ್ಪು ಬಗ್ಗೆ ತುಂಬಾ ಅಭಿಮಾನವಿದೆ. ಈ ಹಿಂದೆ ಕೊನೆಯಪುಟ, ಬೆಳಕಿನ ಕನ್ನಡಿ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾರರ್, ಕಾಮಿಡಿ, ಮನರಂಜನೆಯಂಥ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಎ.ಟಿ.ರವೀಶ್ ಮಾತನಾಡಿ, ಚಿತ್ರದಲ್ಲಿ ಮೊದಲು ಒಂದು ಪ್ಯಾಥೋಸಾಂಗ್ ಮಾತ್ರ ಇತ್ತು. ನಂತರ ೪ ಹಾಡು ಮಾಡುವಂತಾಯ್ತು, ಅಜಯ್ ವಾರಿಯರ್, ಮೆಹಬೂಬ್ ಸಾಬ್ ಲೆಮನ್ ಪರಶುರಾಮ್ ಹೀಗೆ ಹೆಸರಾಂತ ಗಾಯಕರೇ ಹಾಡಿದ್ದಾರೆ ಎಂದರು. ರಂಜನ್ ಕುಮಾರ್ ಚಿತ್ರದಲ್ಲಿ ಮೂಗನ ಪಾತ್ರ ಮಾಡಿದ್ದು ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಜಿ.ರಂಗಸ್ವಾಮಿ ಅವರು ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಜೀವನ್ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಜಯಂತಿ ರೇವಡಿ, ಅರ್ಚನಾಶೆಟ್ಟಿ, ಪ್ರಿಯಾ ಕೊಠಾರಿ, ಭೀಮಾನಾಯಕ್, ಸುರೇಶ್ ಬೆಳಗಾವಿ, ರೋಹನ್ ಕುಬ್ಸದ್ ಮುಂತಾದವರು ಪರ್ಯಾಯ ಚಿತ್ರದಲ್ಲಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!