Kausalya Supraja Rama Review : ಸಂಬಂಧಗಳ ಪಾಠ ಮಾಡುವ ಕೌಸಲ್ಯ ಸುಪ್ರಜ ರಾಮ ; ಇದು ಗಂಡಸರು ನೋಡಲೇಬೇಕಾದ ಸಿನಿಮಾ!

ಚಿತ್ರ : ಕೌಸಲ್ಯಾ ಸುಪ್ರಜಾ ರಾಮ
ನಿರ್ದೇಶಕ : ಶಶಾಂಕ್‌
ನಿರ್ಮಾಪಕ : ಬಿ.ಸಿ. ಪಾಟೀಲ್
ಸಂಗೀತ : ಅರ್ಜುನ್ ಜನ್ಯ

ಛಾಯಾಗ್ರಹಣ : ಸುಜ್ಞಾನ
ತಾರಾಗಣ : ಡಾರ್ಲಿಂಗ್ ಕೃಷ್ಣ , ಬೃಂದಾ ಆಚಾರ್ಯ, ಮಿಲನಾ ನಾಗರಾಜ್‌, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ನಾಗಭೂಷಣ್ ಹಾಗೂ ಮುಂತಾದವರು…

ರೇಟಿಂಗ್ 4/5

ಹೆಣ್ಮಕ್ಕಳ ಮುಂದೆ‌ ತಲೆ ಬಾಗಬಾರದು ಎಂಬ ಹಠ ಹೊಂದಿರುವ ರಾಮ್ (ಡಾರ್ಲಿಂಗ್ ಕೃಷ್ಣ) ಅಲಿಯಾಸ್ ರಾಮೇಗೌಡನ  ಕಥೆ ಇದು. ತಾನು ಗಂಡಸು ಎಂಬ ಪೊಗರು ಆತನ ಮೈಯೆಲ್ಲಾ ತುಂಬಿಕೊಂಡಿರುತ್ತದೆ. ಅಂಥವನ ಬಾಳಲ್ಲಿ ಶಿವಾನಿ (ಬೃಂದಾ ಆಚಾರ್ಯ) ಎಂಬ ಸುಂದರಿ ಎಂಟ್ರಿ ನೀಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆದರೆ ಗಂಡಸುತನದ ಅಂಹಕಾರದಿಂದ ರಾಮ್‌ನ ಜೀವನದಲ್ಲಿ ಆ ಪ್ರೀತಿ ಉಳಿಯುವುದಿಲ್ಲ. ಆಗ ಅವನ ಜೀವನದಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡುವವಳು ಮುತ್ತುಲಕ್ಷ್ಮಿ (ಮಿಲನಾ ನಾಗರಾಜ್). ಕಥೆಯ ಕೊನೆಯಲ್ಲಿ ರಾಮ್ ನಿಜವಾದ ಗಂಡಸು ಹೌದೋ ಅಲ್ಲವೋ ಎಂಬುದು ಗೊತ್ತಾಗುತ್ತದೆ. ಅದೇ ಈ ಸಿನಿಮಾದ ತಿರುಳು. ನಿಜವಾದ ಗಂಡಸು ಎಂದರೆ ಯಾರು ಎಂಬ ವ್ಯಾಖ್ಯಾನವೂ ಈ ಸಿನಿಮಾದಲ್ಲಿದೆ.

 ನಾನು ಗಂಡು , ನಾನು ಹೇಳಿದಂತೆ ನಡೆಯಬೇಕು… ಹೆಣ್ಣು ಕೇಳುವುದಕ್ಕೆ ಅಷ್ಟೇ ಸೀಮಿತ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ವಿಚಾರ. ಆದರೆ ಪ್ರಸ್ತುತ ಕಾಲಮಾನದಲ್ಲಿ ಇವೆಲ್ಲವನ್ನು ಹೊರತುಪಡಿಸಿ ಗಂಡು, ಹೆಣ್ಣು , ಸಂಬಂಧ , ತಂದೆ , ತಾಯಿ , ಸ್ನೇಹಿತರ ಒಡನಾಟ ಹೇಗೆಲ್ಲಾ ಸಾಗಿ ಬದುಕನ್ನ ಕಟ್ಟಿಕೊಡುತ್ತದೆ ಅನ್ನೋದನ್ನಲವ್, ಫ್ಯಾಮಿಲಿ , ಕಾಮಿಡಿ , ಸೆಂಟಿಮೆಂಟ್ ಮೂಲಕ ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ಈ ವಾರ ತೆರೆಗೆ ತಂದಿರುವಂತಹ ಚಿತ್ರ “ಕೌಸಲ್ಯಾ ಸುಪ್ರಜಾ ರಾಮ”.

ಮನೆಯ ಯಜಮಾನ ಸಿದ್ದೇಗೌಡ (ರಂಗಾಯಣ ರಘು) ಗಂಡಸು ಅಂದ್ರೆ ಹೀಗೆ ಇರಬೇಕು , ತನ್ನ ಆಜ್ಞೆಯನ್ನು ಎಲ್ಲರೂ ಪಾಲಿಸುವಂತಿರಬೇಕು ಎಂಬುವುದು ಅವನ ನಡವಳಿಕೆ. ಅದಕ್ಕೆ ಪೂರಕವಾಗಿ ಶಾಂತ ಸ್ವಭಾವದ ತಾಯಿ ಕೌಸಲ್ಯಾ (ಸುಧಾ ಬೆಳವಾಡಿ). ಇವರ ಮುದ್ದಿನ ಮಗ ರಾಮ (ಡಾರ್ಲಿಂಗ್ ಕೃಷ್ಣ). ಬಾಲ್ಯದಲ್ಲಿ ರಾಮ ಶಾಲಾ ಕಾರ್ಯಕ್ರಮದಲ್ಲಿ ದ್ರೌಪದಿ ಪಾತ್ರ ನಿರ್ವಹಿಸಿದ್ದನ್ನ ತಡೆದ ಸಿದ್ದೇಗೌಡ ಮಗನಿಗೆ ಗಂಡಸಿನಂತೆ ಇರಬೇಕು ನೀನು ಗಂಡು ಎಂದು ಮುಗಿವಿನಲ್ಲೇ ರಾಮನ ಮನಸ್ಸನ್ನು ಬದಲಿಸುತ್ತಾನೆ. ರಾಮನ ಖಡಕ್ ಮಾತು , ವರ್ತನೆ ಕಾಲೇಜಿನಲ್ಲಿ ಮುಂದುವರೆಯುತ್ತದೆ.

ತನ್ನ ಮಾವನ ಮಗ ಸಂತು (ನಾಗಭೂಷಣ್) ಅವನೊಟ್ಟಿಗೆ ಆಟವಾಡುತ್ತಾ ಬೆಳೆದು , ಕಾಲೇಜಿನಲ್ಲಿ ರಾಮನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿ. ಅಮ್ಮನ ಮುದ್ದಿನ ಮಗನಾದ ರಾಮ ತನ್ನ ಆಸೆಯಂತೆ ಓಡಾಡುತ್ತಾ ಯಾವ ಹುಡುಗಿ ಕಡೆಯೂ ಕಣ್ ಹಾಕದಿದ್ದರೂ ಆತನ ಬದುಕಿಗೆ ಅದೇ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ (ಬೃಂದಾ ಆಚಾರ್ಯ) ತುಂಟ ಹುಡುಗರ ರಾಗಿಂಗ್ ಗೆ ಸಿಲುಕಿ ರಾಮನ ಸ್ನೇಹ ಪಡೆದು ನಂತರ ಅವನನ್ನು ಇಷ್ಟಪಡುತ್ತಾಳೆ.

ವಿದ್ಯಾಭ್ಯಾಸ ಮುಗಿಸಿದ ರಾಮ ಕಂಪನಿಗೆ ಕೆಲಸಕ್ಕೆ ಸೇರುತ್ತಾನೆ. ಮುಂದೆ ಈ ಇಬ್ಬರ ಪ್ರೇಮಿಗಳ ಓಡಾಟ , ಕೋಪ, ಮುನಿಸು ಇದ್ದದ್ದೆ. ಶಿವಾನಿಯಾ ಲೈಫ್ಸ್ಟೈಲ್,ಮಾತುಕತೆ ಜಗಳಕ್ಕೆ ಕಾರಣವಾಗಿ ದೂರವಾಗುತ್ತಾರೆ. ಮುಂದೆ ಕುಡಿತಕ್ಕೆ ದಾಸನಾಗುವ ರಾಮ. ಇದರ ನಡುವೆ ರಾಮನಿಗೆ ತಂದೆ ತಾಯಿ ಕೂಡ ಹುಡುಗಿ ಹುಡುಕಿರುತ್ತಾರೆ. ಮಗನ ಪರಿಸ್ಥಿತಿ ನೋಡಿ ತಾಯಿ ಕಣ್ಣೀರಾಕುತ್ತಾಳೆ.

ಮುಂದೆ ರಾಮನ ಕುಟುಂಬದಲ್ಲಿ ದುರಂತ ಒಂದು ನಡೆಯುತ್ತದೆ. ಅದು ರಾಮನ ಬದುಕಿನಲ್ಲಿ ಮೋಡ ಕವಿದಂತಾಗುತ್ತದೆ. ತನ್ನಗೆ ಪಾಪ ಪ್ರಜ್ಞೆ ಕಾಡುತ್ತಿರುವಾಗಲೇ ತನ್ನ ತಾಯಿಯ ಆಸೆಯಂತೆ ಅವರು ನೋಡಿರುವ ಹುಡುಗಿ ಮುತ್ತುಲಕ್ಷ್ಮಿ ( ಮಿಲನ ನಾಗರಾಜ್) ಯನ್ನ ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಆಕೆಯ ಬದುಕು ಇನ್ನೂ ವಿಚಿತ್ರ. ಅದು ಏನು… ಹೇಗೆ… ರಾಮನ ಬದುಕು ಏನಾಗುತ್ತೆ…“ಕೌಸಲ್ಯಾ ಸುಪ್ರಜಾ ರಾಮ” ಸಿನಿಮಾ ನೋಡಬೇಕು.

ನಿರ್ದೇಶಕ ಶಶಾಂಕ್ ಒಂದು ಅರ್ಥಪೂರ್ಣ ಸಾಂಸಾರಿಕ ಸಂಬಂಧಗಳ ಮೌಲ್ಯ , ಗಂಡು , ಹೆಣ್ಣಿನ ತಾರತಮ್ಯ , ಸ್ನೇಹ , ಪ್ರೀತಿ , ಗೆಳೆತನ ಎಲ್ಲವನ್ನು ಬೆಸೆದುಕೊಂಡು ಪ್ರಸ್ತುತ ಸಮಾಜದ ಪ್ರತಿಯೊಬ್ಬರು ನೋಡಬೇಕಾದಂತ ಸುಂದರ ಚಿತ್ರವನ್ನು ಕಣ್ಮುಂದೆ ತೆರೆದಿಟ್ಟಿದ್ದಾರೆ. ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ಅದರಲ್ಲೂ ತಾಯಿ ಮಗನಿಗೆ ಹೇಳುವ ಮಾತು ‘ನಾವು ಯಾರತ್ತಾದ್ರೂ ಏನಾದರೂ ತಗೊಂಡ್ರೆ… ಮತ್ತೆ ಅದನ್ನು ಹಿಂತಿರುಗಿಸುವ ಶಕ್ತಿ ಇದ್ದರೆ ಮಾತ್ರ ಅದನ್ನು ಪಡೆಯಬೇಕು’ ಎಂಬ ಮಾತು ಅರ್ಥಪೂರ್ಣ , ಜೀವನದಲ್ಲಿ ಪ್ರತಿಯೊಬ್ಬರು ಅರಿಯಬೇಕಾದಂತ ವಿಚಾರ.

ತಾಯಿ ಮಗನ ಮಮಕಾರ ಸೆಳೆಯುತ್ತದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದ್ದು , ಚಿತ್ರದ ಓಟ ನಿಧಾನವಾಗಿದೆ. ಇನ್ನಷ್ಟು ವೇಗ ಮಾಡಬಹುದಿತ್ತು. ಆದರೆ ಮುಜುಗರವಿಲ್ಲದೆ ಎಲ್ಲರೂ ನೋಡುವಂತ ಚಿತ್ರವನ್ನು ನಿರ್ಮಾಪಕ ಬಿ.ಸಿ. ಪಾಟೀಲ್ ಹಾಗೂ ತಂಡ ನೀಡಿದೆ. ಇನ್ನು ಹೈಲೈಟ್ ಅಂದರೆ ಅರ್ಜುನ್ ಜನ್ಯ ರ ಸಂಗೀತದ ಮೋಡಿ , ಟೈಟಲ್ ಟ್ರ್ಯಾಕ್ ಹಾಗೂ ನೈಂಟಿ ಹಾಕೋ ಕಿಟ್ಟಪ್ಪ ಹಾಡು ಗುನುಗುವಂತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!