ಶೀರ್ಷಿಕೆಯ ಮೂಲಕವೇ ಬಹಳಷ್ಟು ಗಮನ ಸೆಳೆದಿರುವಂತಹ ಚಿತ್ರ “ಪರಿಶುದ್ಧಂ”. ವಿಭಿನ್ನ ಪ್ರಯತ್ನದ ದರ್ಪಣ, ಆಗೋದೆಲ್ಲಾ ಒಳ್ಳೆದಕ್ಕೆ ನಂತರ ಆರನ್ ಕಾರ್ತಿಕ್ ನಿರ್ದೇಶನದ 3ನೇ ಚಿತ್ರ ಇದಾಗಿದೆ. ಈಗ “ಪರಿಶುದ್ಧಂ” ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು , ಸೆನ್ಸಾರ್ ಸರ್ಟಿಫಿಕೇಟ್ ಅನ್ನು ಪಡೆದು ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆ ಸಿದ್ಧವಾಗುತ್ತಿದೆ.
ಕಥೆ , ಚಿತ್ರಕಥೆ, ಸಂಗೀತ ಮತ್ತು ಸಾಹಿತ್ಯ ಮತ್ತು ನಿರ್ದೇಶನ ಆರೋನ್ ಕಾರ್ತಿಕ್ ಮಾಡಿದ್ದಾರೆ. ಈಗಾಗಲೇ ಕಲರ್ ಗ್ರೇಡಿಂಗ್ , ಡಿ .ಐ , V.F.X ಸೇರಿದಂತೆ ವ್ಯಾಪಕ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆಯಂತೆ. ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ.
ಈ ಚಿತ್ರದಲ್ಲಿ ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರದ ನಾಯಕಿ ಸ್ಪರ್ಶ ರೇಖಾ ಮನೋ ವೈದ್ಯಳ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ಗಾಳಿಪಟ ನೀತು ಶೆಟ್ಟಿ ಸೆಲೆಬ್ರಿಟಿ ಗಾಯಕಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೆ, ದಿಶಾ ಪೂವಯ್ಯ ಎ.ಸಿ.ಪಿ ಪಾತ್ರವನ್ನು ನಿರ್ವಹಿಸಿದ್ದಾರೆ. ರೋಹನ್ ಕಿದಿಯೂರ್, ಭಾರ್ಗವ್, ಕೀರ್ತಿ ಕೃಷ್ಣ ಮತ್ತು ರಾಜ್ ಚರಣ್ ಭ್ರಮಾವರ್ ನಾಲ್ವರು ಯುವ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಮೇಶ್ ಪಂಡಿತ್, ವಿಕ್ಟರಿ ವಾಸು, ಎಂ.ಡಿ.ಕೌಶಿಕ್, ಯತಿರಾಜ್, ಕುರಿಬಾಂಡ್ ರಂಗ , ಮೈಸೂರು ರಮಾನಂದ್ ಸೇರಿದಂತೆ ಹಲವಾರು ಅಭಿನಯಿಸಿದ್ದಾರೆ.
ಈ ಚಿತ್ರ ನಿರ್ದೇಶನ ಮಾಡಿರುವ ಆರನ್ ಕಾರ್ತಿಕ್ ಹಲವು ಹೊಸತಿಗೆ ನಾಂದಿ ಹಾಕಲು ಮುಂದಾಗಿದ್ದಾರೆ. ಬಾಲಿವುಡ್ ಹಿರಿಯ ನಟ ದಿವಂಗತ ಅಮೃಷ್ ಪುರಿ ಅವರನ್ನು VFX ಮೂಲಕ ಈ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಬಹುದಂತೆ. ಮತ್ತೊಂದು ವಿಶೇಷ ಎಂದರೆ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಆರನ್ ಕಾರ್ತಿಕ್ ಕಂಡುಹಿಡಿದ “ಯೆಹೋವರಾಜ್ಯ ರಾಗ” ಎಂಬ ಹೊಸ ಹಿಂದೂಸ್ತಾನಿ ರಾಗದಲ್ಲಿ 2 ಸಂಗೀತ ಟಿಪ್ಪಣಿ ಗಳೊಂದಿಗೆ ‘ಸ’ ಮತ್ತು ‘ ರಿ ‘ ಎರಡು ಪದಗಳೊಂದಿಗೆ ಮೊದಲ ಪ್ರಯತ್ನದ ಹಾಡು ಇದಾಗಿದ್ದು’ ಕ ‘ 106 ಪದಗಳ ಸಂಗಮದೊಂದಿಗೆ ವಿಭಿನ್ನ ಹಾಡು ಸಿದ್ಧವಾಗಿದೆಯಂತೆ. ಇದರ ಜೊತೆಗೆ ‘ಎ ಟೇಲ್ ಆಫ್ ದಿ ನೈಟ್’… ಎಂಬ ಇಂಗ್ಲಿಷ್‌ನಲ್ಲಿ ಸಾಹಿತ್ಯ , ಹಾಡಿ ಮತ್ತು ಸಂಯೋಜನೆ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ. ಒಟ್ನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಸದಾ ಸಿದ್ಧ ಎನ್ನುವ ನಿರ್ದೇಶಕ ಆರನ್ ಕಾರ್ತಿಕ್ ಬಹಳಷ್ಟು ನಿರೀಕ್ಷೆಯನ್ನು ಈ ಚಿತ್ರದ ಮೇಲೆ ಇಟ್ಟುಕೊಂಡಿದ್ದಾರೆ. ಇನ್ನಷ್ಟು ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದಾರಂತೆ.
Be the first to comment