Aparoopa Review: ಭಾವನೆಗಳಿಗೆ ಹೊಸರೂಪ, ಪ್ರೇಮಕತೆ ಅಪರೂಪ

ಚಿತ್ರ : ಅಪರೂಪ

ನಿರ್ದೇಶಕ : ಮಹೇಶ್ ಬಾಬು
ನಿರ್ಮಾಪಕ :ಕೆ.ಆರ್.ಮಹೇಶ್
ಸಂಗೀತ : ಪ್ರಜ್ವಲ್ ಪೈ
ಛಾಯಾಗ್ರಾಹಕ : ಸೂರ್ಯಕಾಂತ್
ಪಾತ್ರವರ್ಗ : ಸುಘೋಷ್, ಹೃತಿಕಾ, ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ಹಾಗೂ ಮುಂತಾದವರು…

ಬಿಸಿನಿಮಾಸ್ ರೇಟಿಂಗ್ : 4/5

ಪ್ರೀತಿ ಪ್ರೇಮದ ಸುತ್ತ ಹಲವಾರು ಕಥೆಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಆ ಸಾಲಿನಲ್ಲಿ ಅರಳಿದ ಮನಸುಗಳ ಪ್ರೀತಿ , ಪ್ರೇಮ , ತುಂಟಾಟ , ಗಲಾಟೆ , ತಂದೆ ತಾಯಿಯ ವಾತ್ಸಲ್ಯ , ಸ್ನೇಹಿತರ ಸಂಬಂಧ ಹೀಗೆ ಹಲವಾರು ಅಂಶಗಳೊಂದಿಗೆ ಬೆಸೆದುಕೊಂಡು ಒಂದು ಸುಂದರ ಪ್ರೇಮ ಕಾವ್ಯವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರವೇ “ಅಪರೂಪ”.

ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎನ್ನುವಂತಹ ಕಥಾನಾಯಕ ವಿಜಯ್ (ಸುಘೋಷ್) ಒಬ್ಬ ಪಕ್ಕ ಮಿಡ್ಲ್ ಕ್ಲಾಸ್ ಲೋಕಲ್ ಹುಡುಗ. ತಂದೆ ,ತಾಯಿ , ತಂಗಿಯ ಜೊತೆ ಪುಟ್ಟ ಪ್ರಪಂಚ ಹಾಗಯೇ ಗೆಳೆಯನೊಂದಿಗೆ ಸರಿ ಎಣ್ಣೆ ಹೊಡೆಯುತ್ತಾ ಮೋಜು- ಮಸ್ತಿಯಲ್ಲಿ ಕಾಲ ಕಳೆಯುತ್ತಾನೆ. ಮತ್ತೊಂದೆಡೆ ಶ್ರೀಮಂತ ಕುಟುಂಬದಲ್ಲಿ ಬೆಳೆದು ತಂದೆ ತಾಯಿಯ ಒಡನಾಟದ ಪ್ರೀತಿ ಸಿಗದೇ ಒದ್ದಾಡುವ ಮುದ್ದಿನ ಮಗಳು ನಾಯಕಿ ಹಾಸಿನಿ (ಹೃತಿಕಾ) ತನ್ನನ್ನು ಪ್ರೀತಿಸುವ ಹೃದಯಕಾಗಿ ಪರದಾಡುತ್ತಾಳೆ.

ಅಚಾನಕ್ಕಾಗಿ ಇವರಿಬ್ಬರ ಭೇಟಿ ಕಲಹದಿಂದಲೇ ಆರಂಭವಾಗಿ ನಾನಾ ಸಂದರ್ಭದಲ್ಲಿ ಒಟ್ಟಿಗೆ ಸೇರುವ ಇಬ್ಬರ ಮನಸ್ಸು ಸ್ನೇಹದಿಂದ ಪ್ರೀತಿಯ ಕಡೆ ತಿರುಗುತ್ತದೆ. ವಿಜಯ್ ನಡುವಳಿಕೆ ಹಲವು ಬಾರಿ ಹಾಸಿನಿ ತಂದೆಗೆ ಬೇಸರ ತಂದಿರುತ್ತದೆ. ಇವರಿಬ್ಬರ ಪ್ರೀತಿ , ಸಲ್ಲಾಪವನ್ನು ಕಾಣುವ ಹಾಸಿನಿಯ ತಂದೆ (ಅವಿನಾಶ್) ಇವರಿಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಆತಂಕಕ್ಕೊಳಗಾಗುತ್ತಾನೆ. ಒಂದು ಘಟನೆಯಲ್ಲಿ ಆತನಿಗೆ ವಿಜಯ್ ಪುಂಡತನದ ಪರಿಚಯವಾಗಿರುತ್ತದೆ.

ತನ್ನ ಪ್ರೀತಿಯ ಕೊರತೆಯೇ ಮಗಳು ವಿಜಯ್‍ಗೆ ಹತ್ತಿರವಾಗಲು ಕಾರಣ ಎಂಬುದನ್ನರಿತ ತಂದೆ ಒಂದು ದಿನಪೂರ್ತಿ ಬಿಡುವು ಮಾಡಿಕೊಂಡು ಮಗಳನ್ನು ಸುತ್ತಾಡಿಸಿಕೊಂಡು ಶಾಪಿಂಗ್ ಮಾಡಿಸುತ್ತಾನೆ. ಈ ಸಮಯದಲ್ಲಿ ನಾಯಕ ನಾಯಕಿಗೆ ಎಷ್ಟು ಕರೆ ಮಾಡಿದರೂ ತೆಗೆದಿದ್ದಾಗ ಅವನು ಕೋಪದಿಂದ ಅವಳನ್ನ ಬಯ್ಯುತ್ತಾನೆ. ಮತ್ತೊಂದು ಕಾರಣ ಇವರಿಬ್ಬರೂ ದೂರವಾಗಲು ದಾರಿ ಮಾಡುತ್ತದೆ.

ಇಬ್ಬರ ನಡುವಿನ ಇಗೋಯಿಸಂ ಬಹಳಷ್ಟು ಪರಿತಪಿಸುವಂತೆ ಮಾಡುತ್ತದೆ. ಹಾಸಿನಿಯನ್ನು ಮರೆಯಲಾಗದೆ ನಾಯಕ ವಿಜಯ್ ಕುಡಿತವನ್ನು ಜಾಸ್ತಿ ಮಾಡಿಕೊಳ್ಳುತ್ತಾನೆ. ಇತ್ತ ಹಾಸಿನಿ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ. ತನ್ನ ಮೊದಲ ಆಮಂತ್ರಣ ಪತ್ರಿಕೆಯನ್ನು ವಿಜಯ್ ಗೆ ಕೊಡುತ್ತಾಳೆ. ಮುಂದೆ ಇಲ್ಲಿಂದ ಕಥೆ ಹೊಸ ರೂಪ ಪಡೆದುಕೊಳ್ಳುತ್ತದೆ.

ಇಬ್ಬರು ದೂರವಾಗಲು ಕಾರಣವೇನು…
ನಾಯಕಿ ಯಾರನ್ನು ಮದುವೆಯಾಗುತ್ತಾಳೆ…
ನಾಯಕನ ಬದುಕು ಏನಾಗುತ್ತೆ…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಒಮ್ಮೆ ನೀವು ಅಪರೂಪ ಚಿತ್ರ ನೋಡಬೇಕು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಆಕಾಶ್ , ಅರಸು ಸೇರಿದಂತೆ ಹಲವಾರು ಯಶಸ್ವಿ ಚಿತ್ರ ನಿರ್ದೇಶನ ಮಾಡಿದಂತ ಮಹೇಶ್ ಬಾಬು ಸಾರಥ್ಯದ ಯುವ ಜೋಡಿಯ ಅಪರೂಪ ಒಂದು ಪ್ರೇಮ ಕಥೆಯಾಗಿದ್ದು , ಯುವ ಮನಸುಗಳ ತಲ್ಲಣ , ಸ್ನೇಹ , ಸಂಬಂಧಗಳ ಸುತ್ತ ಸುಮಧುರ ಹಾಡುಗಳ ಮೂಲಕ ಬೆಸೆದುಕೊಂಡು ಸಾಗಿದೆ. ಅಪ್ಪು ಹಾಡಿರುವ ಹಾಡು ಮನ ಮುಟ್ಟುವಂತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!