‘ಅಪರೂಪ’ ಚಲನಚಿತ್ರ ಜು.14ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಮಹೇಶ್ ಬಾಬು ತಿಳಿಸಿದರು.
ನಿರ್ದೇಶಕ ಮಹೇಶ್ ಬಾಬು ಮಾತನಾಡಿ ‘ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ 12ನೇ ಸಿನಿಮಾ ಇದಾಗಿದೆ. ಚಿತ್ರದ ಮೂಲಕ ನಾಯಕರಾಗಿ ಸುಘೋಷ್ ಹಾಗೂ ನಾಯಕಿಯಾಗಿ ಋತಿಕಾ ಶ್ರೀನಿವಾಸ್ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ. ಇಬ್ಬರಿಗೂ ಕನ್ನಡದಲ್ಲಿ ಇದು ಮೊದಲ ಚಿತ್ರ. ಕಥೆಗೆ ಪೂರಕವಾಗಿ ನಾಯಕ, ನಾಯಕಿಯನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
‘ಪುನೀತ್‌ರಾಜ್‌ಕುಮಾರ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ದೊಡ್ಡ ನಟರನ್ನು ನಾಯಕರನ್ನಾಗಿಸಿಕೊಂಡು ಆಕಾಶ್, ಮಿಲನ ಸೇರಿದಂತೆ 11 ಸಿನಿಮಾ ಮಾಡಿದ್ದೇನೆ. ಹೊಸಬರ ಜತೆಯೂ ಕೆಲಸ ಮಾಡಿದ್ದೇನೆ. ನನಗೆ ದೊಡ್ಡ ದೊಡ್ಡ ನಟ, ನಟಿಯರೇ ಬೇಕೆಂದೇನೂ ಇಲ್ಲ. ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಟಿಯರು ಇಂದು ದೊಡ್ಡ ನಾಯಕಿ ನಟಿಯರಾಗಿ ಬೆಳೆದಿದ್ದಾರೆ. ಇದು ತೃಪ್ತಿ ತಂದಿದೆ. ಹೊಸ ಪ್ರತಿಭೆಗಳು ಬಂದಷ್ಟೂ ಕನ್ನಡ ಚಿತ್ರರಂಗಕ್ಕೆ ಅನುಕೂಲ’ ಎಂದರು.
‘ಚಿತ್ರದ ನಟಿ ನಟಿ ಋತಿಕಾ ಅವರು ಕನ್ನಡತಿಯಾಗಿದ್ದು, ಬಾಲನಟಿಯಾಗಿ ಗುರುತಿಸಿಕೊಂಡವರು. ಈಗಾಗಲೇ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಟ ಸುಘೋಷ್ ಮಂಡ್ಯದವರಾಗಿದ್ದು, ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ₹ 3.5 ಕೋಟಿ ಬಜೆಟ್‌ನಲ್ಲಿ ಮದ್ದೂರಿನ ಕೆ.ಆರ್.ಮಹೇಶ್ ನಿರ್ಮಾಣದ ಈ ಸಿನಿಮಾವನ್ನು ಚಿಕ್ಕಮಗಳೂರು, ಬೆಂಗಳೂರು, ಕಾಶ್ಮೀರ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. ನೂರು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.
Be the first to comment