Agrasena Movie Review : ತಂದೆ-ಮಗನ ಬಾಂಧವ್ಯದ ಜೊತೆಗೆ ಹಳ್ಳಿ ಬದುಕಿನ ಕಥೆ ಹೇಳುವ ಅಗ್ರಸೇನಾ!

ಚಿತ್ರ: ಅಗ್ರಸೇನಾ

ನಿರ್ದೇಶನ: ಮುರುಗೇಶ್‌ ಕಣ್ಣಪ್ಪ

ನಿರ್ಮಾಣ: ಮಮತಾ ಜಯರಾಮ್‌ ರೆಡ್ಡಿ

ತಾರಾಗಣ: ಅಮರ್‌ ವಿರಾಜ್‌ ರಚನಾ ದಶರಥ್‌ ಅಗಸ್ತ್ಯ ಬೆಳಗೆರೆ ರಾಮಕೃಷ್ಣ ಮತ್ತಿರರು

ರೇಟಿಂಗ್ : 3.5/5

ನಗರದಲ್ಲಿ ನಡೆಯುವ ಪ್ರೇಮಕತೆ ಮತ್ತು ಹಳ್ಳಿಯಲ್ಲಿ ನಡೆಯುವ ತಂದೆ ಮಗನ ಬಾಂಧವ್ಯದ ಕತೆ ಒಂದು ಹಂತದಲ್ಲಿ ಪರಸ್ಪರ ಕೂಡಿಕೊಳ್ಳುತ್ತದೆ. ಅಲ್ಲಿಂದಾಮೇಲೆ ನಡೆಯುವ ವಂಚನೆ, ಮೋಸ, ಕ್ರೋಧ, ಅಸಹಾಯಕತೆ, ದ್ವೇಷದ ಕತೆಯೇ ಅಗ್ರಸೇನಾ.

ಭಾವುಕತೆಯೇ ದೂರವಾಗಿರುವ ಸಂದರ್ಭದಲ್ಲಿ ಬಂದಿರುವ ಭಾವುಕ ಸಿನಿಮಾ ಇದು. ತಂದೆ ಮಗನ ಬಾಂಧವ್ಯ, ತಂದೆ ಕೊಂಚ ದೂರ ಉಳಿದಾಗ ಮಗನ ಸಂಕಟ, ಮಗನನ್ನು ಪ್ರೀತಿಯಿಂದ ಬೆಳೆಸುವ ತಂದೆಯ ಕಟು ವ್ಯಕ್ತಿತ್ವ ಎಲ್ಲವೂ ಸೇರಿಕೊಂಡು ಚಿತ್ರಕ್ಕೊಂದು ಭಾವುಕ ಆವರಣವನ್ನು ಸೃಷ್ಟಿಸಿದೆ. ಹಳ್ಳಿಯಲ್ಲೇ ಇರುವ ಆ ತಂದೆ ಹುಷಾರು ತಪ್ಪಿ ಸಿಟಿ ಸೇರುವಲ್ಲಿಂದ ಕತೆ ಆರಂಭವಾಗುತ್ತದೆ.

ಆ ಹಿರಿಯ ಯಜಮಾನನ ಪಾತ್ರದಲ್ಲಿ ರಾಮಕೃಷ್ಣ ಕಾಣಿಸಿಕೊಂಡಿದ್ದಾರೆ. ಅವರ ಉಪಸ್ಥಿತಿ ಚಿತ್ರಕ್ಕೊಂದು ಘನತೆ ತಂದುಕೊಟ್ಟಿದೆ. ಇಡೀ ಸಿನಿಮಾ ಅವರ ಪಾತ್ರದ ಸುತ್ತಲೇ ಕಟ್ಟಲಾಗಿದೆ. ಅವರು ತೆಗೆದುಕೊಂಡ ನಿರ್ಧಾರದಿಂದ ಹಳ್ಳಿಯಲ್ಲೇ ಉಳಿದಿದ್ದ ನಾಯಕ ಕಡೆಗೆ ಅ‍ವರಿಗಾಗಿಯೇ ನಗರಕ್ಕೆ ಬರುವಲ್ಲಿಗೆ ಕತೆ ಮತ್ತೊಂದು ಮಜಲಿಗೆ ತೆರೆದುಕೊಳ್ಳುತ್ತದೆ.

ಇಲ್ಲಿ ಪ್ರೇಮಕತೆಯಿದೆ. ಅದಕ್ಕೆ ಹೊಂದಿಕೊಂಡು ಡ್ಯುಯೆಟ್ ಇದೆ. ಮಗನ ಭಾವುಕತೆ ಇದೆ. ಅದರೊಂದಿಗೆ ನೋವಿನ ಪರಿತಾಪವಿದೆ. ಅಲ್ಲಲ್ಲಿ ಕಾಮಿಡಿಯಿದೆ. ಮತ್ತೊಂಚೂರು ಕೌತುಕವಿದೆ. ನಗರದ ಹುಡುಗರ ಹೊಟ್ಟೆಪಾಡಿನ ತರ್ಲೆಗಳಿವೆ. ಪುಟ್ಟದೊಂದು ಫ್ಲಾಶ್‌ಬ್ಯಾಕ್ ಇದೆ. ಅವೆಲ್ಲಕ್ಕೂ ದ್ವೇಷದ ಬೆಂಕಿಯೊಂದು ಸೇರಿಕೊಂಡು ಕತೆ ಥ್ರಿಲ್ಲರ್ ಮಾದರಿಯಲ್ಲಿ ರೂಪುಗೊಂಡಿದೆ.

ಇದು ಭಾವುಕತೆ ಬೆರೆತ ಥ್ರಿಲ್ಲರ್ ಗುಣಗಳಿರುವ ಸಿನಿಮಾ. ಕಮರ್ಷಿಯಲ್ ಚಿತ್ರಕ್ಕೆ ಏನೇನು ಬೇಕೋ ಅದನ್ನೆಲ್ಲವನ್ನೂ ಒಂದೇ ಕಡೆ ಸೇರಿಸಿಟ್ಟಂತೆ ನಿರ್ದೇಶಕರು ಚಿತ್ರಕತೆ ಹೆಣೆದಿದ್ದಾರೆ. ಆದರೆ ಈ ಹಂತದಲ್ಲಿ ಅವರು ಚಿತ್ರಕತೆಯ ದಾರವನ್ನು ಸಡಿಲು ಬಿಟ್ಟಿದ್ದಾರೆ. ಕೆಲವು ಬಿಟ್ಟಪದಗಳು ಬಿಟ್ಟಂತೆಯೇ ಉಳಿದಿದೆ. ಅದರಾಚೆಗೂ ಕಾಡುವುದು ಅಪ್ಪನ ಪ್ರೀತಿ ಮತ್ತು ಮಗನ ತ್ಯಾಗ.

ಅಸಹಾಯಕ ಮಗನ ಪಾತ್ರದಲ್ಲಿ ಅಗಸ್ತ್ಯ ಬೆಳಗೆರೆ, ಉಡಾಫೆ ತಮಾಷೆ ವ್ಯಕ್ತಿತ್ವದ ನಾಯಕನಾಗಿ ಅಮರ್ ವಿರಾಜ್ ಅವರವರ ಪಾತ್ರದ ಮಹತ್ವವನ್ನು ಅರ್ಥಪೂರ್ಣವಾಗಿ ದಾಟಿಸಿದ್ದಾರೆ. ರಾಮಕೃಷ್ಣ ಇರುವ ದೃಶ್ಯಗಳೆಲ್ಲಕ್ಕೂ ತನ್ನಿಂತಾನೇ ಘನತೆ ಪ್ರಾಪ್ತವಾಗಿದೆ. ಅವರು ಮಾತಿಗಿಂತ ಹೆಚ್ಚು ಮೌನವಾಗಿಯೇ ಇದ್ದು, ಕಣ್ಣಿನಲ್ಲಿಯೇ ಭಾವನೆಗಳನ್ನು ದಾಟಿಸಿ ಕಾಡುತ್ತಾರೆ. ಎಂಎಸ್ ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ ಹಿತಕರವಾಗಿದೆ.

ಕೌಟುಂಬಿಕ ವಿಚಾರಕ್ಕೆ ಥ್ರಿಲ್ಲರ್ ಅಂಶವನ್ನು ಸೇರಿಸಿದರೆ ಏನಾಗಬಹುದು ಎಂಬುದಕ್ಕೆ ಈ ಸಿನಿಮಾ ಉದಾಹರಣೆಯಂತಿದೆ. ಚಿತ್ರದ ಕಟ್ಟಕಡೆಯ ದೃಶ್ಯ ಮುಗಿದಾಗ ಮನಸ್ಸು ಭಾರವಾಗುತ್ತದೆ. ಅಷ್ಟರ ಮಟ್ಟಿಗೆ ಇದು ಕಾಡುವ ಗುಣ ಹೊಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!